ಕನ್ನಡಪ್ರಭ ವಾರ್ತೆ ಮದ್ದೂರು
ಖಾಸಗಿ ವೈದ್ಯರ ಮನೆ ಬೀಗ ಮುರಿದು ಒಳ ನುಗ್ಗಿದ ಇಬ್ಬರು ದುಷ್ಕರ್ಮಿಗಳು ನಗದು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿರುವ ಘಟನೆ ಪಟ್ಟಣದ ಕೆಂಗಲ್ ಹನುಮಂತಯ್ಯ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ಜರುಗಿದೆ.ಪಟ್ಟಣದ ಶರತ್ ಕ್ಲಿನಿಕ್‌ನ ಡಾ. ಟಿ. ಚಂದ್ರ ಮನೆಯಲ್ಲಿ ಕೃತ್ಯ ನಡೆದಿದ್ದು, ಮನೆಯ ಅಲ್ಮರಾದಲ್ಲಿದ್ದ 14 ಚಿನ್ನದ ಬಳೆಗಳು, ನಾಲ್ಕು ಜೊತೆ ಡೈಮಂಡ್ ಬಳೆಗಳು, ಎರಡು ಕರಿಮಣಿ ಸರ ಮತ್ತು ಡಾಲರ್, ಒಂದು ಚಿನ್ನದ ಕಿರುಸರ, ಐದು ಚಿನ್ನದ ಸರ, ಮೂರು ಬಿಳಿ ಡಾಲರ್‌ಗಳು ಹಾಗೂ ಮೂರು ಗೋಲ್ಡ್ ಪೆಂಡೆಂಟ್‌ಗಳು ಎರಡು ಎಳೆಯ ಚಿನ್ನದ ಸರ ಜೊತೆಗೆ ಹಸಿರು ಡಾಲರ್, ಚಿನ್ನದ ಸರ ಕದ್ದಿದ್ದಾರೆ.
ತಾಲೂಕು ತೈಲೂರು ಗ್ರಾಮದ ತೈಲೂರಮ್ಮ ದೇವಸ್ಥಾನಕ್ಕೆ ಸೇರಿದ ಸುಮಾರು 8 ಲಕ್ಷ ರು. ನಗದು ಹಣ, ಚಿನ್ನದ ಬಿಳಿ ಕಲ್ಲಿನ ಗುಂಡಿನ ಸರ ಹಾಗೂ ಮತ್ತಿತರ ಒಡವೆಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿ ಪರಾರಿಯಾಗಿದ್ದಾರೆ.ಕಳುವಾಗಿರುವ ಚಿನ್ನಾಭರಣದ ಅಂದಾಜು ಮೌಲ್ಯ ಸುಮಾರು 40 ರಿಂದ 45 ಲಕ್ಷ ಎಂದು ತಿಳಿದಿದೆ. ದುಷ್ಕರ್ಮಿಗಳು ಕೃತ್ಯ ನಡೆಸಿದ ನಂತರ ಮನೆ ಮುಂಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳ ಜೊತೆಗೆ ಡಿವಿಆರ್ ಸಹಿತ ಅಪಹರಿಸಿಕೊಂಡು ಹೋಗಿದ್ದಾರೆ.
ಡಾ. ಚಂದ್ರ ತಮ್ಮ ಕುಟುಂಬ ಸಮೇತ ತಮಿಳುನಾಡಿನ ಪುಣ್ಯಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳಿದ್ದರು. ಇದನ್ನು ದುರುಪಯೋಗಪಡಿಸಿಕೊಂಡು ದುಷ್ಕರ್ಮಿಗಳು ಮಧ್ಯರಾತ್ರಿ ಮನೆ ಮುಂಭಾಗದ ಡೋರ್‌ಲಾಕನ್ನು ಬಲವಾದ ಆಯುಧದಿಂದ ಕತ್ತರಿಸಿ ಒಳ ನುಗ್ಗಿ ಚಿನ್ನಾಭರಣಗಳನ್ನು ದೋಚಿದ್ದಾರೆ.ಈ ಸಂಬಂಧ ಡಾ. ಚಂದ್ರ ಅವರ ದೂರಿನ ಮೇರೆಗೆ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕಾರ್‍ಯ ಕೈಗೊಂಡು ಆರೋಪಿಗಳ ಪತ್ತೆಗಾಗಿ ವಿವಿಧ ಆಯಾಮಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಎಎಸ್ಪಿ ಗಂಗಾಧರಸ್ವಾಮಿ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶಿವಕುಮಾರ್, ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ರವಿ ಹಾಗೂ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.