ನೂತನ ಸರ್ಕಾರಿ ಆಸ್ಪತ್ರೆಗೆ ಖಾಸಗಿ ವ್ಯಕ್ತಿಯಿಂದ ಬೀಗ...!

KannadaprabhaNewsNetwork | Published : Mar 17, 2025 12:32 AM

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಗಡಿಭಾಗದ ಊಗಿನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಜಾಗ ನಮ್ಮದು ಎಂದು ಖಾಸಗಿ ವ್ಯಕ್ತಿಗಳ ಕುಟುಂಬ ಬೀಗ ಹಾಕಿದ ಘಟನೆ ನಡೆದಿದೆ. ವಾರದ ಹಿಂದೆಯಷ್ಟೇ ನೂತನ ಕಟ್ಟಡದಲ್ಲಿ ಆಸ್ಪತ್ರೆ ಆರಂಭವಾಗಿತ್ತು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕೆ.ಆರ್.ಪೇಟೆ ತಾಲೂಕಿನ ಗಡಿಭಾಗದ ಊಗಿನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಜಾಗ ನಮ್ಮದು ಎಂದು ಖಾಸಗಿ ವ್ಯಕ್ತಿಗಳ ಕುಟುಂಬ ಬೀಗ ಹಾಕಿದ ಘಟನೆ ನಡೆದಿದೆ.

ವಾರದ ಹಿಂದೆಯಷ್ಟೇ ನೂತನ ಕಟ್ಟಡದಲ್ಲಿ ಆಸ್ಪತ್ರೆ ಆರಂಭವಾಗಿತ್ತು. ಮಹಿಳಾ ಆರೋಗ್ಯ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿ ಆಸ್ಪತ್ರೆ ಮೇಲು ಅಂತಸ್ತಿನಲ್ಲಿ ಮಲಗಿದ್ದರು. ಈ ವೇಳೆ ಮಾದಪ್ಪ ಕುಟುಂಬದವರು ಆಸ್ಪತ್ರೆ ಜಾಗ ನಮ್ಮದು, ಖಾಲಿ ಮಾಡಿ ಎಂದು ಬೆದರಿಸಿ ನೆಲ ಅಂತಸ್ತಿಗೆ ಬೀಗ ಹಾಕಿದ್ದಾರೆ.

ಇವರ ಗದ್ದಲ, ಬೆದರಿಕೆಯಿಂದಾಗಿ ಶನಿವಾರ ಬೆಳಗ್ಗೆ ಆಸ್ಪತ್ರೆ ಮೇಲಾಧಿಕಾರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ವೈದ್ಯಾಧಿಕಾರಿಗಳು ಸಭೆ ನಡೆಸಿದರು. ನಂತರ ಆಸ್ಪತ್ರೆ ವೈದ್ಯ ಡಾ.ಪ್ರಸಾದ್ ಗ್ರಾಮಸ್ಥರೊಂದಿಗೆ ಕಿಕ್ಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇನ್ಸ್ ಪೆಕ್ಟರ್‌ ರೇವತಿ ಮಾತನಾಡಿ, ಮೈಸೂರು ಮಹಾರಾಜರ ಕಾಲಾವಧಿಯಲ್ಲಿ ವಿದ್ಯಾದಾನ, ಭೂ ದಾನ ಅಡಿಯಲ್ಲಿ ಭೂಮಿ ನೀಡಲಾಗಿದೆ. ದಾನಿ ಶಿವನಂಜೇಗೌಡರ ಮಗ ನಂಜಪ್ಪ ತಮ್ಮ ಭೂಮಿ ದಾನ ಮಾಡಿದ ಫಲವಾಗಿ 4 ದಶಕಗಳ ಹಿಂದೆ ಕಿರಿದಾದ ಆರೋಗ್ಯ ಕೊಠಡಿ ನಿರ್ಮಾಣವಾಗಿದೆ. ತದ ನಂತರ ಸಿಬ್ಬಂದಿ ಇಲ್ಲದೆ ಹಾಗೂ ಕಟ್ಟಡ ನಿರ್ವಹಣೆ ಕಾಣದೆ ಅನುಪಯುಕ್ತವಾಗಿತ್ತು.

ಗ್ರಾಮಸ್ಥರ ಹೋರಾಟದ ಫಲವಾಗಿ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣವಾಗಿದೆ. ಭೂಮಿ ಪೂಜೆ ವೇಳೆ ಮಾದಪ್ಪ ಕುಟುಂಬದವರು ಮುಂದಾಳತ್ವ ವಹಿಸಿ ಸಹಕರಿಸಿದ್ದರು ಎಂದರು.

ಈಗ ತಗಾದೆ ತೆಗೆದು ಆಸ್ಪತ್ರೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿರುವುದು ತರವಲ್ಲ. ಕಾನೂನು ಕ್ರಮ ಜರುಗಿಸಿ ಮಾದಪ್ಪನವರ ಜಾಗವಾಗಿದ್ದರೆ ಕಾನೂನಾತ್ಮಕವಾಗಿ ಸಾಕ್ಷಿ ಒದಗಿಸಲಿ ಎಂದು ಮಾದಪ್ಪಕುಟುಂಬದವರಿಗೆ ತಿಳಿಹೇಳಿ ಮುಚ್ಚಳಿಕೆ ಬರೆಯಿಸಿಕೊಂಡರು.

ಈ ವೇಳೆ ಡಾ.ಪ್ರಸಾದ್, ಗ್ರಾಮ ಮುಖಂಡರಾದ ಪರಮೇಶ್, ಮುರುಳೀಧರ್, ನಂಜೇಗೌಡ, ತಿಮ್ಮಶೆಟ್ಟಿ, ಲಕ್ಕಯ್ಯ, ನಂಜಪ್ಪ, ರೂಪೇಶ್, ಉಮೇಶ, ಧರ್ಮೇಗೌಡ, ಶಿವರಾಜ್, ರಾಜಶೇಖರಮೂರ್ತಿ, ಜಗದೀಶ್, ಸ್ವಾಮಿ ಮತ್ತಿತರರು ಇದ್ದರು.

Share this article