ಕನ್ನಡಪ್ರಭ ವಾರ್ತೆ ಅರಸೀಕೆರೆ
ಶೈಕ್ಷಣಿಕ ವರ್ಷದಲ್ಲಿ ಯಶಸ್ವಿಯಾಗಿ ಸಾಗಿ ಬಂದಿದ್ದೀರಿ ಪರೀಕ್ಷೆಗಳಲ್ಲೂ ಯಶಸ್ಸು ಹಾರೈಸುತ್ತೇನೆ ಎಂದು ಶಿಕ್ಷಣ ಸಂಯೋಜಕ ಮಲ್ಲೇಶ್ ವಿದ್ಯಾರ್ಥಿಗಳಿಗೆ ಹೇಳಿದರು.ಅವರು ನಗರದ ಬಿಎಚ್ ರಸ್ತೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭಕೋರಿದ ಅವರು, ವಿವೇಕಾನಂದರ ವಾಣಿ ಮತ್ತು ಆದರ್ಶಗಳನ್ನು ನೀವು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಕೆಲ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. ಅಂತಹ ಜ್ಞಾನವನ್ನು ಶ್ರೀ ಕೃಷ್ಣ ಗೀತೆಯ ಮೂಲಕ ನೀಡಿದ್ದಾನೆ. ಅಂತಹ ಜ್ಞಾನವನ್ನು ಸಹ ಜೀವನದಲ್ಲಿ ಅನುಸರಿಸಬೇಕು ಎಂದು ಕರೆ ನೀಡಿದರು. ಭಾಷಣ ಮಾಡದೆ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು ಮಕ್ಕಳ ಮನಮುಟ್ಟುವಂತೆ ತಾವು ನೀಡಬೇಕಾದ ಮಾಹಿತಿಯನ್ನು ಕತೆಗಳ ಮೂಲಕ ತಿಳಿಸಿಕೊಟ್ಟರು.
ಈ ಶಾಲಾ ಪರಿಸರ ಬಹಳ ಉತ್ತಮವಾಗಿದೆ. ಶಾಲಾ ಮೇಲ್ಛಾವಣಿ ಸೇರಿದಂತೆ ದುರಸ್ತಿ ಕಾರ್ಯವು ನಡೆಯುತ್ತಿದ್ದು ಹೊಸ ಶೈಕ್ಷಣಿಕ ವರ್ಷಕ್ಕೆ ಹೊಸ ಶಾಲೆಯಾಗಿ ಕಂಗೊಳಿಸಲಿದೆ, ನೀವು ಮಕ್ಕಳಿಗೆ ಪೋಷಕರಿಗೆ ಈ ಶಾಲೆಯ ಬಗ್ಗೆ ತಿಳಿಸಿಕೊಟ್ಟು ಅವರ ಹಾಗೂ ನಿಮ್ಮ ಮನೆಯಲ್ಲಿರುವ ತಂಗಿ ತಮ್ಮಂದಿರನ್ನು ಶಾಲೆಗೆ ದಾಖಲಿಸಬೇಕೆಂದು ಅವರು ಹೇಳಿದರು.ಶಾಲಾ ಮುಖ್ಯ ಶಿಕ್ಷಕಿ ಕರಿಯಮ್ಮ ಮಾತನಾಡಿ, ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯವನ್ನು ಇಲಾಖೆ ಒದಗಿಸಿ ಕೊಟ್ಟಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ವಿದ್ಯೆಯು ಯಾರು ಕದಿಯದ ಆಸ್ತಿ, ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಎದುರಿಸಿ. ಈಗಾಗಲೇ ಸಾಕಷ್ಟು ಮರುಬೋಧನೆಯಾಗಿದೆ. ಗುಂಪು ಓದು ಮಾಡಿದ್ದೀರಿ, ಕಲಿತಿರುವುದನ್ನು ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸಿ, ನಿಮ್ಮ ನೆರೆಹೊರೆಯವರ ಮಕ್ಕಳನ್ನು ಈ ಶಾಲೆಗೆ ಸೇರಿಸುವಂತೆ ನೀವು ಇಲ್ಲಿನ ಸೌಲಭ್ಯವನ್ನು ತಿಳಿಸಿಕೊಡಿ ಎಂದರು.
ವಿಜ್ಞಾನ ವಿಷಯದ ಶಿಕ್ಷಕಿ ಮಮತಾ ತಮ್ಮ ವಿಷಯದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಮುಂದಿನ ವರ್ಷವೂ ಸಹ ಇದೇ ರೀತಿ ನೀಡುವುದಾಗಿ ಹೇಳಿದ ಅವರು ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು ಎಂದರು.ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತವನ್ನು ಶಿಕ್ಷಕ ಶಶಿಧರ್ ನಡೆಸಿಕೊಟ್ಟರು. ಶಿಕ್ಷಕರಾದ ಶ್ರೀನಿವಾಸ್ ಪ್ರೀತಿ, ವೀಣಾ, ಚಂದ್ರೇಗೌಡ, ಪೋಷಕರು ಉಪಸ್ಥಿತರಿದ್ದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು .