ಯೋಗರಾಜ ಭಟ್ ಓದಿದ ಶಾಲೆಗೆ ಖಾಸಗಿ ಕಂಟಕ!

KannadaprabhaNewsNetwork |  
Published : Feb 06, 2024, 01:31 AM IST
ಫೋಟೋ : ೩ಎಚ್‌ಎನ್‌ಎಲ್೬ | Kannada Prabha

ಸಾರಾಂಶ

ಒಂದೂವರೆ ಶತಮಾನ ಕಂಡಿರುವ ತಿಳವಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು.

ಒಂದೂವರೆ ಶತಮಾನ ಕಂಡ ಕನ್ನಡದ ದೇಗುಲ । ಶಾಲಾಭಿವೃದ್ಧಿ ಕುರಿತು ನಿರ್ಲಕ್ಷ್ಯ, ಮೂಲಸೌಲಭ್ಯದ ಕೊರತೆ । ಮಕ್ಕಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಚಿತ್ರ ನಿರ್ದೇಶಕ ಯೋಗರಾಜ ಭಟ್ ಓದಿದ ಶಾಲೆಗೀಗ ಖಾಸಗೀ ಶಾಲೆಗಳು ಕಂಟಕಪ್ರಾಯವಾಗಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕುಸಿಯುತ್ತಿದೆ!

ಒಂದೂವರೆ ಶತಮಾನ ಕಂಡಿರುವ ತಿಳವಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಈ ಶಾಲೆ ಕಣ್ಣು ಮುಚ್ಚುವಲ್ಲಿ ಯಾವ ಸಂಶಯವೂ ಇಲ್ಲ.

ಬ್ರಿಟಿಷರಿಂದ ಆರಂಭ:

೧೮೭೩, ಬ್ರಿಟಿಷರ ಕಾಲಾವಧಿಯಲ್ಲಿ ತಿಳವಳ್ಳಿಯ ಕರೇಗಲ್ ವೃತ್ತದಲ್ಲಿ ಶಾಲೆ ಆರಂಭವಾಯಿತು. ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಈ ಜಾಗೆಯನ್ನು ಹೆಣ್ಣು ಮಕ್ಕಳ ಶಾಲೆಗಾಗಿ ಬಿಟ್ಟು ಕೊಟ್ಟು ಹೊಸ ಕಟ್ಟಡದಲ್ಲಿ ಮುಂದುವರೆಯಿತು. ಆ ಕಾಲದಲ್ಲೆ ಸೇವಾದಳದ ಶಕ್ತಿ ಹರ್ಡೇಕರ ಮಂಜಪ್ಪನವರ ವಂಶಸ್ಥರಾದ ತಿಳವಳ್ಳಿಯ ಯಲ್ಲಪ್ಪ ಸೋಮಪ್ಪ ಮೇಲಗಿರಿ ಅವರು ಈ ಶಾಲೆಯ ಕಟ್ಟಡ ಕಟ್ಟಲು ೧ ಎಕರೆ ೧೦ ಗುಂಟೆ ಜಾಗವನ್ನು ದಾನ ಮಾಡಿದರು. ಮುಂದೆ ಹರ್ಡೇಕರದ ಪುಟ್ಟಭಟ್ ಮತ್ತು ರಮೇಶಭಟ್‌ ಹರ್ಡೇಕರ ಅವರು ೧೯೫೪ರಲ್ಲಿ ೬ ಗುಂಟೆ, ೨೦೦೭ರಲ್ಲಿ ದತ್ತಣ್ಣ ಹಾಗೂ ಶ್ರೀರಾಮ ಹರ್ಡೇಕರ ಮತ್ತೆ ೪ ಗುಂಟೆ ಜಾಗೆಯನ್ನು ಈ ಶಾಲೆಗೆ ದಾನ ನೀಡಿದರು.

ಮೊದಲು ಕೇವಲ ವಿದ್ಯಾರ್ಥಿಗಳಿಗಾಗಿ ಈ ಶಾಲೆ ಆರಂಭವಾಗಿತ್ತು. ಬಳಿಕ ಹೆಣ್ಣು ಮಕ್ಕಳಿಗೂ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಯಿತು. ಕಳೆದ ೧೦ ವರ್ಷಗಳಿಂದ ಗಂಡು ಹಾಗೂ ಹೆಣ್ಣು ಮಕ್ಕಳು ಒಂದೇ ಕಡೆ ಕಲಿಯಲು ಅವಕಾಶ ಮಾಡಿಕೊಡಲಾಗಿದೆ. ಹೊಸ ಶಿಕ್ಷಣ ಪದ್ಧತಿಯಂತೆ ಇಲ್ಲಿ ಆಂಗ್ಲ ಮಾಧ್ಯಮವನ್ನೂ ಕೂಡ ಆರಂಭಿಸಲಾಗಿದೆ. ಒಟ್ಟು ೧೬೦ಕ್ಕೂ ಅಧಿಕ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದೇ ಆವರಣದಲ್ಲಿ ಉರ್ದು ಪ್ರಾಥಮಿಕ ಶಾಲೆಯೂ ನಡೆಯುತ್ತಿದೆ.

ಸುತ್ತ ಮುತ್ತಲ ಗ್ರಾಮಗಳ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಈ ಶಾಲೆ ತುಂಬಾ ಅನುಕೂಲವಾಯಿತು. ಆದರೆ ಈಗದು ತನ್ನ ಮೂಲಸ್ವರೂಪವನ್ನೇ ಕಳೆದುಕೊಂಡಿದೆ. ಶಾಲಾಭಿವೃದ್ಧಿ ಕುರಿತು ನಿರ್ಲಕ್ಷ್ಯ, ಮೂಲಸೌಲಭ್ಯದ ಕೊರತೆ ಹಾಗೂ ಹೊಸ ಖಾಸಗಿ ಶಾಲೆಗಳ ಕಾರಣದಿಂದಾಗಿ ಈ ಶಾಲೆಯ ಮಕ್ಕಳ ಸಂಖ್ಯೆ ಈಗ ಕುಂಠಿತವಾಗಿದೆ.

ಹಳೆಯ ವಿದ್ಯಾರ್ಥಿಗಳು:

ಖ್ಯಾತ ಸಿನೆಮಾ ನಿರ್ದೇಶಕ ಯೋಗರಾಜ ಭಟ್‌ ಸೇರಿದಂತೆ ಅನೇಕ ಖ್ಯಾತನಾಮರು ಇಲ್ಲಿ ಓದಿದ್ದಾರೆ ಎನ್ನುವುದು ಗಮನೀಯ. ಈಗ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕೇವಲ ಸರ್ಕಾರದ ಅನುದಾನ ಮಾತ್ರವಲ್ಲ, ಸಾರ್ವಜನಿಕರಿಂದಲೂ ದಾನ ಪಡೆದು ಶಾಲೆಯ ಅಭಿವೃದ್ಧಿಗೆ ಈಗಿನ ಶಾಲಾ ಅಭಿವೃದ್ಧಿ ಸಮಿತಿ ಮುಂದಾಗಿದೆ.

ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ ₹೫೦ ಸಾವಿರ ವೆಚ್ಚದಲ್ಲಿ ಆನವಟ್ಟಿಯ ಚೈತನ್ಯ ಫೈನಾನ್ಸ್‌ ದಾನದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಳೇ ವಿದ್ಯಾರ್ಥಿಗಳು ಹಾಗೂ ತಿಳವಳ್ಳಿಯ ಜನತೆಯ ದಾನದಿಂದ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಸ್ಮಾರ್ಟ್‌ ಕ್ಲಾಸ್‌ ವ್ಯವಸ್ಥೆಯನ್ನು ಮಾಡಲಾಗಿದೆ.

ಶಾಲೆಯ ಜಾಗೆಯಲ್ಲಿ ಒಂದು ಕಡೆಗೆ ವಿವಿಧ ಅಂಗಡಿಕಾರರು ಹಾಕಿರುವ ಅಂಗಡಿ ಗಮನಿಸಿ, ಅವರ ಮನವೊಲಿಸಿ ಅವುಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡಲು, ಒಳ್ಳೆಯ ವಾತಾವರಣ ನಿರ್ಮಿಸಬೇಕು ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''