A pro-people administration is essential for a corruption-free society.
-ನ್ಯಾ. ಜಿ.ಎ.ಮಂಜುನಾಥ ಅಭಿಮತ । ಭ್ರಷ್ಟಾಚಾರದ ವಿರುದ್ಧ ಏರ್ಪಡಿಸಿದ್ದ ಜಾಗೃತಿ ಅರಿವು ಸಪ್ತಾಹ -2026 ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭ್ರಷ್ಟಾಚಾರ ಪಿಡುಗು. ಅದು ಸುಶಿಕ್ಷಿತ ಸಮಾಜಕ್ಕೆ ಅಂಟಿದ ಕಳಂಕ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜನಪರ ಆಡಳಿತ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ. ಮಂಜುನಾಥ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಲೋಕಾಯುಕ್ತ ಸಹಯೋಗದಲ್ಲಿ ಭ್ರಷ್ಟಾಚಾರದ ವಿರುದ್ಧ ಏರ್ಪಡಿಸಿದ್ದ ಜಾಗೃತಿ ಅರಿವು ಸಪ್ತಾಹ -2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈನಂದಿನ ಕೆಲಸ-ಕಾರ್ಯಗಳಲ್ಲಿ ಆಕ್ಷೇಪಣೆ, ದೂರುಗಳು, ಆರೋಪಗಳು ಹೆಚ್ಚಾಗುತ್ತಲೆ ಇವೆ. ಇಂತಹ ಆರೋಪಗಳಿಗೆ ಕಾರಣ ಕೆಲಸ ಕಾರ್ಯದ ತೀಕ್ಷ್ಣತೆ ಯಾಗಿರಬಹುದು.
ಅಧಿಕಾರಿ-ಸಿಬ್ಬಂದಿ ಮಾಡುವ ಪ್ರತಿ ಕೆಲಸ-ಕಾರ್ಯಗಳನ್ನು ಸಾರ್ವಜನಿಕರು ಗಮನಿಸುತ್ತಲೇ ಇರುತ್ತಾರೆ. ಅದರಿಂದಲೇ ಇಂತಹ ಪ್ರತಿಕ್ರಿಯೆಗಳು ಬರುತ್ತವೆ. ಆದ್ದರಿಂದ, ಆರೋಪಗಳಿಗೆ ಗಮನ ನೀಡದೇ ಕೆಲಸದಲ್ಲಿ ಪ್ರಾಮಾಣಿಕತೆ ಮೆರೆಯುವಂತೆ ಅವರು ಸಲಹೆ ನೀಡಿದರು.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಭಯ ಧನಪಾಲ ಚೌಗಲಾ ಮಾತನಾಡಿ, ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಅರ್ಹರಿಗೆ ಸೇವೆ ಒದಗಿಸಿದಲ್ಲಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗಲಿದೆ. ಭ್ರಷ್ಟಾಚಾರ ನಿರ್ಮೂಲನೆ ಎಂಬುದು ಸುಲಭದ ವಿಷಯವಲ್ಲ. ಎಲ್ಲರಲ್ಲೂ ಈ ಭಾವನೆ ಸ್ವಯಂಪ್ರೇರಿತವಾಗಿ ಸೃಜನೆಗೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಲಂಚ ಕೇಳುವುದು ತಪ್ಪು, ಕೊಡುವುದೂ ತಪ್ಪು ಎಂದರು.
ಸ್ವಹಿತಾಸಕ್ತಿ ಸಲ್ಲ: ಡಿಸಿ
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸುವ ಅಧಿಕಾರಿ-ಸಿಬ್ಬಂದಿ ತಮ್ಮ ಕೆಲಸದಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಲಿ. ಸ್ವಹಿತಾಸಕ್ತಿ ಇಲ್ಲದಿರಲಿ. ಭ್ರಷ್ಟಾಚಾರ ವಿರೋಧಿಸುವ ಮನಸ್ಥಿತಿ ಇದ್ದು, ಅವು ಆಚರಣೆಯಲ್ಲಿ ಬರಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಮಹಾನಗರಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಲೋಕಾಯುಕ್ತ ಉಪಾಧೀಕ್ಷಕ ಬಿ.ಪಿ.ಚಂದ್ರಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು.
....ಕೋಟ್ ....
ಸಂವಿಧಾನ ದತ್ತವಾಗಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ರಸ್ತೆ ತಡೆ, ರೈಲ್ ರೋಕೋ ದಂತಹ ಪ್ರತಿಭಟನೆಗಳು ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಭಂಗವನ್ನು ಮಾಡುತ್ತಿವೆ. ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಅವಶ್ಯಕತೆಗಳನ್ನು, ನಿರ್ಬಂಧಗಳನ್ನು ನಾಗರೀಕರಾದ ನಾವೇ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ.
-ಜಿ.ಎ. ಮಂಜುನಾಥ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು.
--
ಪೋಟೋ: 31ಎಸ್ಎಂಜಿಕೆಪಿ01
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಲೋಕಾಯುಕ್ತ ಸಹಯೋಗದಲ್ಲಿ ಭ್ರಷ್ಟಾಚಾರದ ವಿರುದ್ಧ ಏರ್ಪಡಿಸಿದ್ದ ಜಾಗೃತಿ ಅರಿವು ಸಪ್ತಾಹ -2026 ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ. ಮಂಜುನಾಥ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.