ಗಮನ ಸೆಳೆದ ಜ್ಯೋತಿರ್ಲಿಂಗಗಳ ಮೆರವಣಿಗೆ

KannadaprabhaNewsNetwork | Published : Mar 9, 2024 1:32 AM

ಸಾರಾಂಶ

ಮನುಷ್ಯನಲ್ಲಿನ ದಾರಿದ್ರವನ್ನು ದೂರ ಮಾಡಿ ಸುಖ, ಶಾಂತಿ ನೆಲೆಸುವಂತೆ ಸರ್ವರನ್ನು ಆಶೀರ್ವದಿಸುವ ಸಾಂಕೇತಿಕವಾಗಿ ರುದ್ರಾಕ್ಷ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ಕುರುಗೋಡು: ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಜ್ಯೋತಿರ್ಲಿಂಗಗಳ ಮೆರವಣಿಗೆ ಜರುಗಿತು.

ಪಟ್ಟಣದ ಸದಾಶಿವ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದಿಂದ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಸ್ಥಾನದಲ್ಲಿ ಸಮಾವೇಶಗೊಂಡಿತು.

ಅಲಂಕೃತ ಕಾರುಗಳ ಮೇಲೆ ಜ್ಯೋತಿರ್ಲಿಂಗಗಳ ಜತೆಗೆ ಪೂರ್ಣಕುಂಭ, ಡೊಳ್ಳು ಮೇಳವು ಮೆರವಣಿಗೆಯ ಮೆರುಗು ಹೆಚ್ಚಿಸಿತ್ತು.

ಸಾರ್ವಜನಿಕರು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನರು ಜ್ಯೋತಿರ್ಲಿಂಗಗಳ ಮೆರವಣಿಗೆ ಸೊಬಗು ಕಣ್ತುಂಬಿಕೊಂಡು ಪುನೀತರಾದರು.

ಜ್ಯೋತಿರ್ಲಿಂಗಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ, ಮಾನಸಿಕ ನೆಮ್ಮದಿಗಾಗಿ ಧ್ಯಾನ ಉತ್ತಮ ಪರಿಹಾರ ಮಾರ್ಗವಾಗಿದೆ. ಶಿವ ಸಾಕ್ಷಾತ್ಕಾರ ಹೊಂದಲು ಬ್ರಹಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕನವರ ಮಾರ್ಗದರ್ಶನದಲ್ಲಿ ಧ್ಯಾನ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಬ್ರಹ್ಮಕುಮಾರಿ ಶೈಲಜಾ ಅಕ್ಕ, ಚನ್ನಬಸಮ್ಮ, ಲಕ್ಷ್ಮಿ, ನೀಲಮ್ಮ, ದ್ರಾಕ್ಷಾಯಿಣಿ ದೊಡ್ಡನಗೌಡ, ಎರಿಸ್ವಾಮಿ, ಮಲ್ಲಿಕಾರ್ಜುನಗೌಡ, ಚೇಗೂರು ಷಣ್ಮುಖ, ಎಚ್. ಹುಸೇನ್ ಬಾಷಾ, ಜಿ.ಎಂ. ಬಸಯ್ಯ ಸ್ವಾಮಿ, ಪಂಪನಗೌಡ, ಬಿ. ಸತೀಶ್, ಕೆ. ಭೀಮಣ್ಣ ಮತ್ತು ಟಿ. ಮಂಜುನಾಥ ಇದ್ದರು.

ವಿಶೇಷ ಪೂಜೆ: ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ನೀಲಕಂಠೇಶ್ವರ ದೇವಸ್ಥಾನ, ದೊಡ್ಡಬಸವೇಶ್ವರ ದೇವಸ್ಥಾನ, ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನ, ರಾಚಮಲ್ಲ ದೇವಸ್ಥಾನಗಳಲ್ಲಿ ರುದ್ರಾಭೀಷೇಕ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಶಿವ ದೇವಸ್ಥಾನಗಳಿಗೆ ಭಕ್ತರು ಬೆಳಗ್ಗೆಯಿಂದ ಭೇಟಿ ನೀಡಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಹೂವು, ಬಿಲ್ವಪತ್ರೆ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.ಶ್ರದ್ಧಾಭಕ್ತಿಯಿಂದ ಪಂಚಲಿಂಗ ಪ್ರದರ್ಶನ

ಕಂಪ್ಲಿ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಅಂಗವಾಗಿ ಗುರುವಾರ ಜ್ಞಾನ ಪ್ರಕಾಶ ಬೀರುವ ಪಂಚಲಿಂಗ ಪ್ರದರ್ಶನವು ಶ್ರದ್ಧಾ ಭಕ್ತಿಯಿಂದ ಜರುಗಿತು.

ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಸಕಲೇಶ್ವರಿ ಅಕ್ಕ ಮಾತನಾಡಿ, ಪರಮ ಜ್ಯೋತಿ ಸ್ವರೂಪನಾದ ಪರಮಾತ್ಮ ಧರೆಗೆ ಅವತರಿಸಿ ಮಾನವನಲ್ಲಿರುವ ಅಜ್ಞಾನದ ಅಂಧಕಾರವನ್ನ ಅಂತ್ಯ ಮಾಡಿ, ಆಧ್ಯಾತ್ಮಿಕ ಜ್ಞಾನದ ಪ್ರಕಾಶತೆಯನ್ನು ನೀಡಿ ಅವರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ದಯಪಾಲಿಸುವ ಸಾಂಕೇತಿಕವಾಗಿ ಬೆಳಕಿನ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಎಂದರು.ಮನುಷ್ಯನಲ್ಲಿನ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳೆಂಬ ಮುಳ್ಳಿನಂತಹ ಗುಣಗಳನ್ನು ಆಧ್ಯಾತ್ಮಿಕ ಜ್ಞಾನದಿಂದ ದೂರ ಮಾಡಿ ಸರ್ವರ ಜೀವನವನ್ನು ವಜ್ರ ಸಮಾನ ಮಾಡುವಾಗ ಸಾಂಕೇತಿಕವಾಗಿ ವಜ್ರಲಿಂಗ ಪ್ರತಿಷ್ಟಾಪಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಇರುವ ದುರ್ಗುಣಗಳನ್ನು ದೂರ ಮಾಡಿ ಸರ್ವರ ಜೀವನವನ್ನು ಹೂವಿನಂತೆ ಸುಗಂಧಭರಿತ ಮಾಡುವುದರ ಸಾಂಕೇತಿಕವಾಗಿ ಪುಷ್ಪ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಶಿವನು ಪ್ರತಿಯೊಬ್ಬ ಮನುಷ್ಯನಿಗೂ ದವಸ ಧಾನ್ಯಗಳನ್ನಿಟ್ಟು ಪೋಷಿಸುವ ಪಾಲಿಸುವ ಸಾಂಕೇತಿಕವಾಗಿ ಧಾನ್ಯ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ಮನುಷ್ಯನಲ್ಲಿನ ದಾರಿದ್ರವನ್ನು ದೂರ ಮಾಡಿ ಸುಖ, ಶಾಂತಿ ನೆಲೆಸುವಂತೆ ಸರ್ವರನ್ನು ಆಶೀರ್ವದಿಸುವ ಸಾಂಕೇತಿಕವಾಗಿ ರುದ್ರಾಕ್ಷ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಪರಮಾತ್ಮನ ಸತ್ಯ ಪರಿಚಯವನ್ನು ತಿಳಿದು ಪ್ರತಿನಿತ್ಯ ಆರಾಧನೆ ಮಾಡುತ್ತಾ ಧ್ಯಾನವನ್ನು ಮಾಡುತ್ತಾ ಸುಖ, ಶಾಂತಿಯಿಂದ ಸರ್ವರ ಜತೆಗೂ ಸ್ನೇಹ ಸಹಬಾಳ್ವೆಯಿಂದ ಕೂಡಿ ಬಾಳಬೇಕು ಎಂದರು.ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಭಾಗವಹಿಸಿದ್ದರು.

ಕಂಪ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಅಂಗವಾಗಿ ಜ್ಞಾನ ಪ್ರಕಾಶ ಬೀರುವ ಪಂಚಲಿಂಗ ಪ್ರದರ್ಶನವು ಶ್ರದ್ಧಾಭಕ್ತಿಯಿಂದ ಜರುಗಿತು.

Share this article