ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ಮೆರವಣಿಗೆಗೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಗಣಪತಿ ಆಶ್ರಮದ ವತಿಯಿಂದ ಭಾನುವಾರ ಆಯೋಜಿಸಿದ್ದ ಮೆರವಣಿಗೆ ರದ್ದಾದ್ದರಿಂದ ಆಶ್ರಮದ ಆವರಣದಲ್ಲಿಯೇ ಮೆರವಣಿಗೆ ನಡೆಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ಮಂದಿರದ ಪ್ರತಿಕೃತಿಯ ಬಳಿಯಲ್ಲಿ ಸೀತಾ, ಲಕ್ಷ್ಮಣ ಸಮೇತ ಶ್ರೀರಾಮನ ವಿಗ್ರಹವನ್ನಿರಿಸಿ ಶೃಂಗರಿಸಲಾಗಿತ್ತು. ಆದರೆ ಇಲ್ಲಿಯೂ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ರಾಮಮಂದಿರ ಪ್ರತಿಕೃತಿಯ ಮುಂದೆ ಶ್ರೀರಾಮನ ವೇಷಧಾರಿ ಬಾಲಕನೊಬ್ಬ ಗಮನ ಸೆಳೆದ.ಇಲ್ಲಿಯೇ ಸೈಕಲ್ ಫ್ಯೂರ್ ಅಗರಬತ್ತಿ ವತಿಯಿಂದ 111 ಅಡಿ ಎತ್ತರದ ಅಗರಬತ್ತಿ ಅನಾವರಣಗೊಳಿಸಲಾಯಿತು. ಶ್ರೀರಾಮ ಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ಯೋಗಿರಾಜ್ಅವರ ತಾಯಿ ಸರಸ್ವತಿ ಮತ್ತು ಸಂಸದ ಪ್ರತಾಪ ಸಿಂಹ ಅವರು ಅಗರಬತ್ತಿ ಬೆಳಗಿಸಿದರು.
ರಾಮತಾರಕ ಮಂತ್ರ ಹವನ
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘವು ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಪ್ರತಿಷ್ಠಾಪನಾ ಕಾರ್ಯಕ್ರಮದ ಯಶಸ್ವಿಗಾಗಿ ಮತ್ತು ಉತ್ತರಾಧಿಮಠದ ಸಹಯೋಗದಲ್ಲಿ ಶ್ರೀರಾಮ ತಾರಕ ಹೋಮ, ಶ್ರೀರಾಮ ಜಪ ಹಾಗೂ ಶ್ರೀರಾಮ ಭಜನೆ ಕಾರ್ಯಕ್ರಮವನ್ನು ಸಿ.ಎಫ್.ಟಿ.ಆರ್.ಐ ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿತ್ತು. ಸಂಘದ ಅಧ್ಯಕ್ಷ ಟಿ.ಡಿ. ಪ್ರಕಾಶ್, ಅನಿರುದ್ಧಾಚಾರ್, ಲಕ್ಷ್ಮೀದೇವಿ, ಹರೀಶ್ ಮೊದಲಾದವರು ಪಾಲ್ಗೊಂಡಿದ್ದರು.
ದಿ ಫೋರಮ್ ಆಫ್ ಬಿಸಿನೆಸ್ ಬ್ರಾಹ್ಮಿಣ್ಸ್ ಮತ್ತು ಶ್ರೀರಾಮ ಸೇವಾ ಸಮಿತಿ ಸಹಯೋಗದಲ್ಲಿ ಅಯೋಧ್ಯಾ ರಾಮ ಮಂದಿರ ಪ್ರತಿಷ್ಠಾಪನ ಸಂಭ್ರಮವನ್ನು ವಿಜಯನಗರದ ಜಯಚಾಮರಾಜೇಂದ್ರ ರಸ್ತೆಯ ಸಮಗ್ರ ಸೂಪರ್ ಸ್ಟೋರ್ ಎದುರು ಆಯೋಜಿಸಲಾಗಿತ್ತು. ಈ ವೇಳೆ ಅಖಂಡ ರಾಮನಾಮ ಜಪ ಮತ್ತು ಭಜನೆ ನಡೆಯಿತು.
ತಿಲಕ್ ನಗರದ ತೆಲಗುರೆಡ್ಡಿ ಸಂಘದ ಶ್ರೀರಾಮ ಮಂದಿರದಲ್ಲಿ ನೂತನ ವಿಗ್ರಹಗಳ ಉದ್ಘಾಟನೆಯನ್ನು ನಮ್ರತಾ ನೆರವೇರಿಸಿದರು. ಈ ವೇಳೆ ಶ್ರೀರಾಮನ ಬಿಂಬಶುದ್ಧಿ, ಸ್ಥಾಪನೆ, ಪಂಚಗವ್ಯ ಹೋಮ ಮತ್ತು ಗಣಪತಿ ಹೋಮ, ಬೆಳಗ್ಗೆ ಸುಪ್ರಭಾತ, ವಿಷ್ಣುಸಹಸ್ರನಾಮ, ಭಕ್ತಿಗೀತೆ, ಅತಿಥಿಗಳಿಂದ ಸನ್ಮಾನ ನೆರವೇರಿತು.
ಜೆ.ಪಿ. ನಗರ ಶರಣ ವೇದಿಕೆ ವತಿಯಿಂದ ಪದ್ಮಭೂಷಣ ಡಾ. ಶಿವಕುಮಾರಸ್ವಾಮೀಜಿ ಸಂಸ್ಮರಣೋತ್ಸವ ಮತ್ತು ದಾಸಹ ದಿನ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ದಿನವನ್ನು ಅಕ್ಕಮಹಾದೇವಿ ಪ್ರತಿಮೆ ಆವರಣದಲ್ಲಿ ನೆರವೇರಿಸಲಾಯಿತು. ಶರಣ ವೇದಿಕೆ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಕುಟುಂಬ ಸಮೇತ ದೀಪ ಹಚ್ಚಿ ನಮಿಸಿದರು. ಬಳಿಕ ಪ್ರಸಾದ ವಿತರಣೆ ನೆರವೇರಿತು.
ವಿಜಯನಗರದ ಗೆಳೆಯರ ಬಳಗ ಅಭಿವೃದ್ಧಿ ಸಹಕಾರ ಸಂಘವು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸಪ್ತಮಾತೃಕ ಚೌಡೇಶ್ವರಿ ಅಮ್ಮನ ಸನ್ನಿಧಿಯಲ್ಲಿ ಲಾಡು ಪ್ರಸಾದ ವಿತರಿಸಿದರು.
ನಗರದ ಉತ್ತರಾದಿಮಠದಲ್ಲಿ ಸಂಜೆ ಸಹಸ್ರ ದೀಪಾಲಂಕಾರ, ಸ್ವಸ್ತಿವಾಚನ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಿತು. ಶ್ರೀ ಭೀಮಸೇನಾಚಾರ್ಯ ಆತನೂರು ಅವರು ಉತ್ತರಕಾಂಡ ಕುರಿತು ಪ್ರವಚನ ನಡೆಸಿಕೊಟ್ಟರು.ಕಲಾವಿದ ಪ್ರವೀಣ್ಚಂದ್ರ ಅವರು ಕುವೆಂಪುನಗರದ ಸೌಗಂಧಿಕ ಉದ್ಯಾನವನ ಆವರಣದಲ್ಲಿ 100x80 ಅಡಿಯ ಬಣ್ಣ ಬಣ್ಣದ ರಂಗೋಲಿಯಲ್ಲಿ ಶ್ರೀರಾಮನ ಕಲಾಕೃತಿ ಅರಳಿತು. ರಂಗೋಲಿ, ಇದ್ದಿಲು, ಉಪ್ಪು ಸೇರಿದಂತೆ ವಿವಿಧ ಬಗೆಯ ಬಣ್ಣಗಳನ್ನು ಬಳಸಿಕೊಂಡು ಶ್ರೀರಾಮನ ಚಿತ್ರ ಬಿಡಿಸಲಾಗಿತ್ತು. ಈ ಚಿತ್ರದ ಬಳಿ ಸಾರ್ವಜನಿಕರು ಸೆಲ್ಫಿ ತೆಗೆಸಿಕೊಂಡರು.
ಸಂಪೂರ್ಣ ರಾಮಾಯಣ ನಾಟಕಬಸವೇಶ್ವರ ರಸ್ತೆಯ ಶ್ರೀ ಚಾಮುಂಡೇಶ್ವರಿ ಕಲಾವಿದರ ಸಂಘವು ನಗರದ ಜಗನ್ಮೋಹನ ಅರಮನೆಯಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶಿಸಿದರು. ಮೈಸೂರು, ಮಡಿಕೇರಿ, ಬೆಂಗಳೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಯ ಕಲಾವಿದರು ಸೇರಿ ಈ ನಾಟಕವನ್ನು ಪ್ರಸ್ತುತಪಡಿಸಿದ್ದು ವಿಶೇಷ. ರಾಮವಿಲಾಸ ರಸ್ತೆಯ ವರ್ತಕರು ಸೇರಿ ಶ್ರೀರಾಮನ ಬೃಹತ್ಕಟೌಟ್ಗೆ ಹಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.
ಸದ್ವಿದ್ಯಾ ಶಾಲೆನಗರದ ಸದ್ವಿದ್ಯಾ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಬೃಹತ್ಎಲ್.ಇ.ಡಿ ಪರದೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರ ಏರ್ಪಡಿಸಲಾಗಿತ್ತು.
ಬಿಜೆಪಿ ಕಚೇರಿಯಲ್ಲಿ ವಿಶೇಷ ಪೂಜೆಬಿಜೆಪಿ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಭಾವಚಿತ್ರವಿಟ್ಟು ವಿಶೇಷ ಪೂಜೆ ನೆರವೇರಿತು. ಬಳಿಕ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ವಿಧಾನ ಪರಿಷತ್ಮಾಜಿ ಸದಸ್ಯ ಸಿದ್ದರಾಜು, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಸೇರಿದಂತೆ ಅನೇರು ಪಾಲ್ಗೊಂಡಿದ್ದರು.
ಮೈಸೂರಿನ ದೇವರಾಜ ಮೊಹಲ್ಲಾದ ಲೋಕಾಭಿ ರಾಮಮಂದಿರದಲ್ಲಿ ವಿಶೇಷ ಪೂಜಾ ನೆರವೇರಿತು. ಸಾವಿರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ಕೊತ್ವಾಲ್ ರಾಮಯ್ಯ ರಸ್ತೆಯಲ್ಲಿರುವ ಹತ್ತು ಜನಗಳ ಶ್ತೀ ಜಾನಕಿ ರಾಮಂದಿರದಲ್ಲಿ ಪ್ರಸಾದ ವಿತರಿಸಿ, ಶ್ರೀರಾಮ ಸ್ಮರಣೆ ಮಾಡಲಾಯಿತು.