ಕನ್ನಡಪ್ರಭ ವಾರ್ತೆ ಹೊಸದುರ್ಗ/ ಹಿರಿಯೂರು
ಭಾರತದ ಹಿಂದೂ ಸಂಸ್ಕೃತಿಯ ಕಡೆ ಇಡೀ ವಿಶ್ವವೇ ಇಂದು ನೋಡುವಂತಾಗಿದೆ ಎಂದು ಹುಣಸೆಘಟ್ಟ ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಗಾಂಧಿ ವೃತ್ತದ ಬಳಿಯಿರುವ ಟ್ಯಾಕ್ಸಿ ನಿಲ್ದಾಣದಲ್ಲಿ ಸೋಮವಾರ ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಯವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ ಆಶೀರ್ವಚನ ನೀಡಿದರು.ಶತಾಯುಷಿಗಳಾಗಿದ್ದ ಸಿದ್ಧಗಂಗೆಯ ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಯವರ ಅನ್ನ, ಅಕ್ಷರ, ಆಶ್ರಯದ ಅಪರಿಮಿತ ಸೇವೆಯನ್ನು ಕಂಡು ರಾಜ್ಯ ಸರ್ಕಾರ ಅವರು ಲಿಂಗೈಕ್ಯರಾದ ದಿನವನ್ನು ‘ದಾಸೋಹದ ದಿನ’ವನ್ನಾಗಿ ಘೋಷಿಸಿದೆ ಎಂದರು.ಗಾಂಧಿ ಕಂಡಂತಹ ರಾಮರಾಜ್ಯದ ಕನಸು ಇಂದು ನನಸಾಗಿದೆ. ಲಕ್ಷಾಂತರ ಕರ ಸೇವಕರ ತ್ಯಾಗ ಬಲಿದಾನದಕ್ಕೆ ಇಂದು ಫಲ ಸಿಕ್ಕಿದೆ. ರಾಮನನ್ನು ಧ್ಯಾನಿಸುವಂತೆ ಈ ದಿನಕ್ಕೆ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದರು.ಸಾನಿಧ್ಯ ವಹಿಸಿದ ಯಳನಾಡು ಸಂಸ್ಥಾನ ಮಠದ ಜ್ಞಾನಪ್ರಭು ಸಿದ್ದರಾಮೇಶ್ವರಸ್ವಾಮೀಜಿ ಮಾತನಾಡಿ, ವಿವಿಧ ಧರ್ಮ, ಜಾತಿಯ ಜನರನ್ನು ಹೊಂದಿರುವ ಭಾರತದಲ್ಲಿ ಎಲ್ಲಾ ವರ್ಗದ ಜನ ಬಾಲರಾಮನನ್ನುಇಂದು ಪೂಜಿಸಿ ಸಂಭ್ರಮಿಸುತ್ತಿದ್ದಾರೆ. ದೇಶದ ಎಲ್ಲಾ ಹಳ್ಳಿ, ನಗರಗಳಲ್ಲಿಯೂ ಹಸಿರು ತೋರಣಗಳು ರಾರಾಜಿಸುತ್ತಿವೆ ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಆಯೋಜಕರಾದ ರಾಗಿಕುಮಾರ್, ಪ್ರವೀಣ್, ಪುರಸಭಾ ಸದಸ್ಯರಾದ ಮಂಜುನಾಥ್, ಶ್ರೀನಿವಾಸ್, ನಾಗರಾಜ್ ಸೇರಿದಂತೆ ಶಿವಕುಮಾರ ಸ್ವಾಮಿಜಿಗಳ ಭಕ್ತರು ಭಾಗವಹಿಸಿದ್ದರು.
ಹಿರಿಯೂರಲ್ಲೂ ವಿಹಿಂಪ, ಭಜರಂಗದಳದ ಸಂಭ್ರಮಹಿರಿಯೂರು: ನಗರದ ಹಲವು ಸರ್ಕಲ್ ಗಳಲ್ಲಿ ಪ್ರಮುಖ ದೇವಾಲಯಗಳಲ್ಲಿ ಹೋಮ, ಹವನ, ರಾಮ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರದ ಸೌಲಭ್ಯ, ರಸ್ತೆಯ ಅಲ್ಲಲ್ಲಿ ಶಾಮಿಯಾನದಡಿ ಪಾನಕ, ಕೋಸಂಬರಿ, ಊಟ ವಿತರಣೆ, ಪ್ರತಿಯೊಂದು ಅಂಗಡಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿರುವುದು, ಬೈಕ್ ಗಳಲ್ಲಿ ಕೇಸರಿ ಬಾವುಟ, ಹೆಗಲಲ್ಲಿ ಕೇಸರಿ ಟವೆಲ್, ಬಹಳಷ್ಟು ಮನೆ ಮುಂದೆ ರಂಗೋಲಿಗಳ ಚಿತ್ತಾರ ಇವು ನಗರದಲ್ಲಿ ಸೋಮವಾರ ಕಂಡು ಬಂದ ದೃಶ್ಯಗಳು. ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷದ ಮುಖಂಡರು,ಕಾರ್ಯಕರ್ತರು ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ದೇವಸ್ಥಾನ, ಕನ್ನಿಕಾ ಮಹಲ್, ಲಕ್ಷ್ಮಿ ವೆಂಕಟೇಶ್ವರ, ಶ್ರೀ ಕೃಷ್ಣ ದೇವಸ್ಥಾನದ ಬಳಿ ಎಲ್ಇಡಿ ಪರದೆ ಮೂಲಕ ಬಾಲರಾಮ ಪ್ರತಿಷ್ಠಾಪನೆಯ ನೇರ ಪ್ರಸಾರ ನೋಡುವ ವ್ಯವಸ್ಥೆ ಮಾಡಿದ್ದರು.
ಈ ವೇಳೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿಯ ಕಾರ್ಯಕರ್ತರಾದ ಮಸ್ಕಲ್ ಶ್ರೀನಿವಾಸ್, ಕೇಶವಮೂರ್ತಿ, ಪ್ರಭಾಕರ್, ಹರೀಶ್, ಗೋವಿಂದಚಾರ್, ಗೋವಿಂದ ಸಿಂಗ್ ಜಿತೇಂದ್ರ ಸಿಂಗ್ ಮುಂತಾದ ನೂರಾರು ರಾಮಭಕ್ತರು ಹಾಜರಿದ್ದರು.ವಿವಿಧೆಡೆ ಕಾರ್ಯಕ್ರಮಗಳು: ಶ್ರೀಕನ್ಯಕಾ ಸೌಹಾರ್ದ ಸಹಕಾರಿ ಬ್ಯಾಂಕ್ ವತಿಯಿಂದ ಇಂದಿರಾ ಕ್ಯಾಂಟೀನ್ ಬಳಿ ಕೋಸಂಬರಿ ಪಾನಕ ವಿತರಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಆರ್.ರಮೇಶ್ ಬಾಬು, ಜಯಲಕ್ಷ್ಮಿ, ಲತಾ, ಬಿ.ಎನ್.ತಿಪ್ಪೇಸ್ವಾಮಿ, ಮಂಜುನಾಥ್, ಅನಂತಕುಮಾರ್, ಅರುಣ್ ಕುಮಾರ್, ವ್ಯವಸ್ಥಾಪಕ ರಾಮಕೃಷ್ಣ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ವತಿಯಿಂದ 108 ಅಗ್ನಿಹೋಮ, ಹನುಮ ನಮಸ್ಕಾರ, ಶ್ರೀ ವಿಷ್ಣು ನಮಸ್ಕಾರ ಕಾರ್ಯಕ್ರಮಗಳು ನಡೆದವು. ನಗರದ ತಾಲೂಕು ಕಚೇರಿ ಬಳಿಯಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಅಂಗವಾಗಿ ವಿಶೇಷ ಪೂಜಾ ಕಾರ್ಯ ಕ್ರಮ ನಡೆದವು. ಅನ್ನಪೂರ್ಣೇಶ್ವರಿ ದೇವರಿಗೆ ಹೂವಿನ ಅಲಂಕಾರ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.