ಖಾಜಾಮೈನುದ್ದೀನ್ ಪಟೇಲ್
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ, ಇಡೀ ಗುಮ್ಮಟ ನಗರಿಯೇ ರಾಮಮಯವಾಗಿ ಕಂಗೊಳಿಸಿತು.
ನಗರದಲ್ಲಿ ಜೈ ಶ್ರೀರಾಮ, ಜೈ ಜಯ ಶ್ರೀರಾಮ ಎಂದು ಭಕ್ತಿಭರಿತ ಉತ್ಸಾಹದಿಂದ ವಿವಿಧ ಕಡೆ ಎಲ್ಲೆಡೆ ಯುವಕರು ಉತ್ಸಾಹದಿಂದ ಶ್ರೀರಾಮನ ಭಾವಚಿತ್ರವುಳ್ಳ ಕೇಸರಿ ಶಲ್ಯ ಧರಿಸಿ, ಕೇಸರಿ ವರ್ಣದ ಟೊಪ್ಪಿಗೆ ಧರಿಸಿ ಭಕ್ತಿಭಾವದಿಂದ ಜಯಘೋಷ ಮೊಳಗಿಸಿದರು. ಮನೆ-ಮನೆಗಳ ಮುಂದೆ ರಂಗವಲ್ಲಿಯ ದಿವ್ಯ ಚಿತ್ತಾರ, ಕೇಸರಿ ವರ್ಣದಲ್ಲಿ ಮಿಂದೆದಿದ್ದ ನಗರ, ಎಲ್ಲೆಡೆ ಮಂಟಪದಲ್ಲಿ ವಿರಾಜಮಾನ ಶ್ರೀರಾಮನ ಭವ್ಯ ಪ್ರತಿಮೆಗೆ ವಿಶೇಷ ಪೂಜೆ.ಬನಾಯೇಂಗೆ ಮಂದಿರ, ರಾಮ ರಾಮ ಜೈ ರಾಜಾ ರಾಮ, ಜೈ ಶ್ರೀರಾಮ ಜೈ ಶ್ರೀರಾಮ ಎಂಬಿತ್ಯಾದಿ ಭಕ್ತಿ ಭಾವದ ಗೀತೆಗಳನ್ನು ಪ್ರಸಾರ ಪಡಿಸಲಾಯಿತು. ಅನೇಕ ಸಂಘ-ಸಂಸ್ಥೆಗಳು ಬೃಹತ್ ಎಲ್‌ಇಡಿ ಪರದೆಗಳನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿ ರಾಮ ಮಂದಿರ ಲೋಕಾರ್ಪಣೆಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿದ್ದರು.
ರಾಮ ನವಮಿ ಉತ್ಸವ ಅಂಗವಾಗಿ ಬೃಹತ್ ಮೆರವಣಿಗೆ, ಅರ್ಥಫೂರ್ಣವಾದ ಕಾರ್ಯಕ್ರಮಗಳ ಆಚರಣೆಗೆ ಸದಾ ಮುಂಚೂಣಿ ವಹಿಸುವ ಉಮೇಶ ವಂದಾಲ ನೇತೃತ್ವದಲ್ಲಿ ರಾಮ ಮಂದಿರ ಲೋಕಾರ್ಪಣೆಯನ್ನು ಹಬ್ಬದಂತೆ ಆಚರಿಸಲು ಕಾರ್ಯಯೋಜನೆ ರೂಪಿಸಿದ್ದು ಯಶಸ್ಸು ಕಂಡಿತು.
ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಕರಸೇವಕರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ, ಕಾಷ್ಠದ ಶ್ರೀರಾಮ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಕರಸೇವೆಯಲ್ಲಿ ಪಾಲ್ಗೊಂಡ ಅನುಭವಗಳನ್ನು ಕಾರಸೇವಕರು ಹಂಚಿಕೊಂಡರು.
ಯುವ ಭಾರತ ಸಂಸ್ಥೆಯ ವತಿಯಿಂದ ಶ್ರೀ ರಾಮಮಂದಿರ ಲೋಕಾರ್ಪಣೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸಲಾಯಿತು.
ಭವ್ಯ ಶ್ರೀರಾಮ ಮಂದಿರ, ಅದಕ್ಕೆ ಹೊಂದಿಕೊಂಡಂತೆ ಧನುರ್ಧಾರಿ ಶ್ರೀರಾಮನ ಪ್ರತಿಕೃತಿ ಹಾಗೂ ಹೃದಯ ಮಂದಿರದಲ್ಲಿ ಶ್ರೀರಾಮ ಸೀತೆಯನ್ನು ಇರಿಸಿದ ಹನುಮಂತನ ದೃಶ್ಯದ ಪ್ರತಿರೂಪ ಭಕ್ತಿಭಾವಕ್ಕೆ ಸಾಕ್ಷಿಯಾಯಿತು.
ಯಜ್ಞಕ್ಕೂ ಮುನ್ನ ಶ್ರೀರಾಮನ ಭಾವಚಿತ್ರವನ್ನು ಪಾಲಕಿಯಲ್ಲಿ ಇರಿಸಿ ವೈಭವದ ಮೆರವಣಿಗೆ ನಡೆಯಿತು. ನೂರಾರು ಮಹಿಳೆಯರು ಭಕ್ತಿಭಾವದಿಂದ ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ಅನೇಕ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.
-ಉಮೇಶ ಕಾರಜೋಳ,
ಅಧ್ಯಕ್ಷರು ಯುವ ಭಾರತ ಸಂಸ್ಥೆ ವಿಜಯಪುರ.