ಕನ್ನಡ ಪ್ರಭ ವಾರ್ತೆ ಮುಧೋಳಸುಳ್ಳು ಭರವಸೆ ನೀಡಿ ಮತದಾರರಿಗೆ ಮೋಸ ಮಾಡುವ ಕಾಲ ಈಗ ಅಂತ್ಯವಾಯಿತು. ಮತದಾರರು ತಮ್ಮ ಮತದಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಬಿಗ್ ಶಾಕ್ ಕೊಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಮಂಗಳವಾರ ಮಧ್ಯಾಹ್ನ ನಗರದ 113ನೇ ಮತಗಟ್ಟೆಯಲ್ಲಿ ಮತ ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಸುಳ್ಳು ಭರವಸೆ ಮತ್ತು ಮೋಸದಾಟಕ್ಕೆ ದೇಶದ ಜನರು ಬೇಸತ್ತು ಹೋಗಿದ್ದಾರೆ. ನಾನು ಹಾಗೆ ಮಾಡುತ್ತೇನೆ, ನಾನು ಹೀಗೆ ಮಾಡುತ್ತೇನೆ, ನನ್ನಿಂದಲೇ ಎಲ್ಲವೂ ನಡೆಯುತ್ತೆ ಎಂದು ಬಣ್ಣ ಬಣ್ಣದ ಮಾತನಿಂದ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಿದ ಬಿಜೆಪಿ ನಾಯಕರಿಗೆ ಮತ್ತು ಪ್ರಧಾನಿಗಳಿಗೆ ಮತದಾರರು ಬಿಗ್ ಶಾಕ್ ನೀಡಲಿದ್ದಾರೆ ಎಂದು ಹೇಳಿದರು.ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಭರವಸೆ ನೀಡಿ ಅದರಂತೆ ನಡೆದುಕೊಂಡಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮತದಾರರಿಗೆ ನೀಡಿದ ಎಲ್ಲ ಗ್ಯಾರಂಟಿ ಭರವಸೆಗಳನ್ನು ಜಾರಿಗೊಳಿಸಿ ನಮ್ಮ ಮೇಲೆ ಮತದಾರರು ಇಟ್ಟಿರುವ ವಿಶ್ವಾಸ ಉಳಸಿಕೊಳ್ಳುತ್ತೇವೆ. ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಕೇಂದ್ರದಲ್ಲಿ ಅಡಳಿತ ಚುಕ್ಕಾಣಿ ಹಿಡಿಯುತ್ತೇವೆಂದು ತಿಳಿಸಿದರು.
ರಾಜ್ಯದಲ್ಲಿ 25ಕ್ಕೂ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿರುವ ಸಂಯುಕ್ತಾ ಪಾಟೀಲ ಅವರು ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯಬೇರಿ ಭಾರಿಸಲಿದ್ದಾರೆ, ಈ ಕ್ಷೇತ್ರದಿಂದ ಪ್ರಥಮ ಭಾರಿಗೆ ಮಹಿಳಾ ಸದಸ್ಯರಾಗಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಶೋಕ ಕಿವಡಿ, ಉದಯಕುಮಾರ ಸಾರವಾಡ, ಎಸ್.ಪಿ.ದಾನಪ್ಪಗೋಳ, ಅಶೋಕ ಗವರೋಜಿ, ಪರಮಾನಂದ ಕುಟ್ರೋಟ್ಟಿ ಸೇರಿದಂತೆ ಇತರರು ಇದ್ದರು.