ಕಾರಟಗಿ:
ಇಲ್ಲಿನ ಮದೀನಾ ಮಜೀದ್‌ನ ಆವರಣದಿಂದ ಆರಂಭವಾದ ರೂಪಕದ ಭವ್ಯ ಮೆರವಣಿಗೆ ರಾಜ್ಯ ಹೆದ್ದಾರಿ ಮೂಲಕ ಸಾಗಿ ಕನಕದಾಸ ವೃತ್ತದಿಂದ ಹಳೆ ಬಸ್ ನಿಲ್ದಾಣದ ಮೂಲಕ ಹಳೆಬಜಾರ್‌ನಿಂದ ಜಾಮೀಯಾ ಮಜೀದಗೆ ಬಂದು ತಲುಪಿತು. ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ ಧಡೆಸೂಗುರ, ಪುರಸಭೆ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿ ಮೆಕ್ಕಾ ಹಾಗೂ ಮದೀನಾ ರೂಪಕಕ್ಕೆ ಹೂವಿನ ಹಾರಹಾಕಿ ಶುಭಾಶಯ ವಿನಿಮಯ ಮಾಡಿಕೊಂಡರು.
ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ ಮಾತನಾಡಿ, ಪ್ರವಾದಿ ಪೈಗಂಬರ್ ನೀಡಿರುವ ಸಂದೇಶಗಳು ಇಸ್ಲಾಂ ಮಾತ್ರವಲ್ಲ ಇಡೀ ಮನುಕುಲಕ್ಕೆ ಮಾರ್ಗದರ್ಶನ ನೀಡಿದಂತಿವೆ. ಜೀವನ ಶಾಶ್ವತವಲ್ಲ, ಮರಣದ ಬಳಿಕ ಬರುವ ಜೀವನವೇ ಶಾಶ್ವತ. ಜನಸೇವೆ ಮಾಡುವ ಮೂಲಕ ದೇವರ ಪ್ರೀತಿ ಗೌರವಾರ್ಹ ಸ್ಥಾನ ಗಳಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು. ಶಾಂತಿ, ಸೌಹಾರ್ದತೆ, ಭ್ರಾತೃತ್ವ ಮತ್ತು ಮಾನವೀಯತೆ ಮಂತ್ರ ಸಾರಿದ ಮುಹಮ್ಮದ್ ಪೈಗಂಬರ್ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.ಬಿಜೆಪಿ ಯುವ ಮುಖಂಡ ಮೌನೇಶ ಧಡೆಸೂಗುರ ಮಾತನಾಡಿ, ಪ್ರೀತಿ, ಅನುಕಂಪ, ಅತ್ಯುತ್ತಮ ಒಳಿತಿನ ಮೂಲಕ ದ್ವೇಷ ಜಯಿಸಿ ತೋರಿಸದವರೇ ಪೈಗಂಬರ ಮುಹಮ್ಮದ್‌ರು ಎಂದರು.
ಈ ವೇಳೆ ಮುಸ್ಲಿಂ ಧರ್ಮ ಗುರು ಸಾಧಿಕ್ ಅಫೀಜ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಮಾಜದ ಅಬ್ದುಲ್ ಗನಿಸಾಬ್, ಡಾ. ಎಂ.ಐ. ಮುದುಗಲ್, ಖಾಜಾ ಹುಸೇನ್ ಮುಲ್ಲಾ, ಬಾಬುಸಾಬ್ ಬಳಿಗಾರ, ಮಹಮದ್ ಇಬ್ರಾಹಿಂ, ಮುಸ್ತಫಾ ಬೇವಿನಗಿಡ, ಜಿಲಾನಿಸಾಬ್ ಗುಜರಿ, ಅಮ್ಜ್ದ ಕಪಾಲಿ, ಶುಕ್ರ ಅಹ್ಮದ್, ಇಸ್ಮಾಯಲ್, ಗೌಸ್ ಮೋಹಿನುದ್ದೀನ್, ಅಮೃಲ್ ಹುಸೇನ್, ಮಹ್ಮದ್ ಅಲಿ, ಯೂಸೂಫ್, ಅಹ್ಮದ್ ಮೇಸ್ತ್ರಿ, ರಬ್ಬಾನಿ, ಸಮದಾನಿ, ಸಿರಾಜ್, ಮೆಹಬೂಬ್, ಶಾನು, ನಪ್ರೀದ್, ಇಲಿಯಾಸ್, ಖಲಂದರ್ ಮುಲ್ಲಾ, ಜಹಾಂಗೀರ್ ಸಾಬ್, ರಜಬ್‌ಅಲಿ, ಅಲಿಹುಸೇನ್ ಇದ್ದರು.