ಹಿರೇಹಳ್ಳದ ಒಡಲು ಬಗೆದ ಮರಳು ದಂಧೆಕೋರರು

KannadaprabhaNewsNetwork |  
Published : Sep 07, 2025, 01:00 AM IST
6ಕೆಪಿಎಲ್23 ಕೊಪ್ಪಳ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ಹಿರೇಹಳ್ಳದಲ್ಲಿ ಮರಳುದಂಧೆಯ ಕರಾಳ ಮುಖ | Kannada Prabha

ಸಾರಾಂಶ

ಹಳ್ಳದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಯಂತ್ರಗಳನ್ನು ಪುಡಿಪುಡಿ ಮಾಡಿದ್ದರು. ಆದರೆ, ನಿಖರವಾಗಿ ಯಾರ ಮೇಲೂ ಕ್ರಮ ಕೈಗೊಂಡಿರಲಿಲ್ಲ. ದೂರು ಸಹ ನೀಡಿರಲಿಲ್ಲ. ಹೀಗಾಗಿ ಮತ್ತೆ ಮರಳು ದಂಧೆ ಶುರುವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಹಿರೇಹಳ್ಳದುದ್ದಕ್ಕೂ ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತೆ ರಾಜಾರೋಷವಾಗಿ ಹಗಲು, ರಾತ್ರಿ ಎನ್ನದೆ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶ ಇಮ್ಮಡಿಗೊಳಿಸಿದೆ.

ಕೋಳೂರು, ಕಾಟ್ರಳ್ಳಿಯಿಂದ ಹಿಡಿದು ಹಿರೇಸಿಂದೋಗಿ, ಬೂದಿಹಾಳ ಗ್ರಾಮದುದ್ದಕ್ಕೂ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಿರೇಹಳ್ಳದ ಒಡಲು ಬಗೆದು ಮರಳು ಸಾಗಿಸಲಾಗುತ್ತದೆ.

ಕ್ಯಾರೆ ಎನ್ನುತ್ತಿಲ್ಲ:

ಹಳ್ಳದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಯಂತ್ರಗಳನ್ನು ಪುಡಿಪುಡಿ ಮಾಡಿದ್ದರು. ಆದರೆ, ನಿಖರವಾಗಿ ಯಾರ ಮೇಲೂ ಕ್ರಮ ಕೈಗೊಂಡಿರಲಿಲ್ಲ. ದೂರು ಸಹ ನೀಡಿರಲಿಲ್ಲ. ಹೀಗಾಗಿ ಮತ್ತೆ ಮರಳು ದಂಧೆ ಶುರುವಾಗಿದೆ. ಆಡಳಿತ ವ್ಯವಸ್ಥೆ ಅಣಕಿಸುವಂತೆ ಮರಳನ್ನು ಅವ್ಯಾಹತವಾಗಿ ಸಾಗಿಸುತ್ತಿರುವುದನ್ನು ನೋಡಿಯೂ ತಡೆಯದೇ ಇರುವುದನ್ನು ಗಮನಿಸಿದರೆ ಆಡಳಿತ ಯಂತ್ರವೂ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳಿವೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

100ಕ್ಕೂ ಹೆಚ್ಚು ಫಿಲ್ಟರ್‌:ಹಳ್ಳದುದ್ದಕ್ಕೂ 100ಕ್ಕೂ ಹೆಚ್ಚು ಮರಳು ಫಿಲ್ಟರ್‌ ಅಳವಡಿಸಲಾಗಿದೆ. ಇವುಗಳ ಮೂಲಕ ಹಗಲು-ರಾತ್ರಿ ಎನ್ನದೆ ಮರಳು ತೆಗೆಯಲಾಗುತ್ತಿದೆ. ಹೀಗೆ ತೆಗೆದ ಮರಳು ಜಿಲ್ಲೆಯ ವಿವಿಧ ಭಾಗಗಳಿಗೆ ಸರಬರಾಜಾಗುತ್ತಿದೆ. ಹೀಗೆ ಅಕ್ರಮವಾಗಿ ತೆಗೆಯುತ್ತಿರುವ ಮರಳಿನಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಅಪಾರ ನಷ್ಟವಾಗಿದೆ. ಆದರೂ ಸಹ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಮಾಹಿತಿ ನೀಡಿದರೂ ಕ್ರಮವಿಲ್ಲ:

ಹಿರೇಹಳ್ಳದುದ್ದಕ್ಕೂ ನಡೆಯುತ್ತಿರುವ ಅಕ್ರಮ ದಂಧೆ ಬಗ್ಗೆ ಸಾರ್ವಜನಿಕರು ಅಧಿಕಾರಿಗಳು ವಾಟ್ಸ್‌ಆ್ಯಪ್‌ಗೆ ಫೋಟೋ, ವೀಡಿಯೋ ಕಳಿಸಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸರಗೊಂಡಿರುವ ಜನತೆ, ಅಧಿಕಾರಿಗಳು ಸಹ ಮರಳು ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆಂದು ಜನರು ದೂರಿದ್ದಾರೆ.

ದಿಕ್ಕು ಬದಲು:

ಹೀಗೆ ಹಿರೇಹಳ್ಳದುದ್ದಕ್ಕೂ ಅಕ್ರಮ ಮರಳುಗಾರಿಕೆ ನಡೆಯುವುದರಿಂದ ಹಳ್ಳದ ದಿಕ್ಕೇ ಬದಲಾಗುತ್ತಿದೆ. ಕಂಡಕಂಡಲ್ಲಿ ಆಳದ ವರೆಗೂ ಒಡಲು ಬಗೆದ ಪರಿಣಾಮ ದಿಕ್ಕು ಬದಲಾಗುತ್ತಿದೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕುಸಿಯುತ್ತಿರುವ ಪರಿಣಾಮ ಪಂಪ್‌ಸೆಟ್‌ಗಳಲ್ಲಿ ನೀರು ಕಡಿಮೆಯಾಗಿ ರೈತರು ಸಂಕಷ್ಟ ಅನುಭವಿಸುವಂತೆ ಆಗಿದೆ. ಇದರಿಂದ 30ಕ್ಕೂ ಹೆಚ್ಚು ಗ್ರಾಮಗಳ ರೈತರ ಬದುಕಿಗೆ ಸಂಚಕಾರ ಬಂದಿದೆ.ಅಕ್ರಮ ದಂಧೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಇದ್ದಾರೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಜನರೇ ಸಾಕ್ಷಿ ಸಮೇತ ದೂರು ಸಲ್ಲಿಸಿದರೂ ಕ್ರಮ ವಹಿಸದೆ ಇರುವುದಕ್ಕೆ ಜನಪ್ರತಿನಿಧಿಗಳ ಒತ್ತಡವೇನಾದರೂ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿಂದೇ ದಾಳಿ ಮಾಡಿ ಯಂತ್ರಗಳನ್ನು ನಾಶ ಮಾಡಿದ್ದ ಅಧಿಕಾರಿಗಳು ಈಗೇಕೆ ಮೌನ ವಹಿಸಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿದೆ.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ