ಶಾಲೆಗಳ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು. ವಿವಿಧ ಕ್ಷೇತ್ರಗಳ ತಜ್ಞರನ್ನು ಆಹ್ವಾನಿಸಿ ವಿಶಾಲ ಮಟ್ಟದ ಚರ್ಚೆ ನಡೆಸಲಾಗುತ್ತದೆ. ಸಂಘವು 50 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದ್ದು, ಶಿಕ್ಷಕರ ಪರವಾಗಿ ಸರ್ಕಾರ ಕೈಗೊಂಡಿರುವ ಹಿತಕರ ನಿರ್ಣಯಗಳಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಗೌರವ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಫೆಬ್ರವರಿ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಧನ್ಯತಾ ಸಮಾರಂಭ, ಸಂಘದ ಸುವರ್ಣ ಮಹೋತ್ಸವ ಹಾಗೂ ಉತ್ಕೃಷ್ಟ ಸೇವಾ ಗೌರವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷೆ ಚೈತ್ರ ನಾಯಕರಹಳ್ಳಿ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು. ವಿವಿಧ ಕ್ಷೇತ್ರಗಳ ತಜ್ಞರನ್ನು ಆಹ್ವಾನಿಸಿ ವಿಶಾಲ ಮಟ್ಟದ ಚರ್ಚೆ ನಡೆಸಲಾಗುತ್ತದೆ. ಸಂಘವು 50 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದ್ದು, ಶಿಕ್ಷಕರ ಪರವಾಗಿ ಸರ್ಕಾರ ಕೈಗೊಂಡಿರುವ ಹಿತಕರ ನಿರ್ಣಯಗಳಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಗೌರವ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಸಿಎಲ್‌ಡಿಆರ್ ನಿಯಮಗಳ ಸಡಿಲಿಕೆ, ಶಿಕ್ಷಕರ ಹುದ್ದೆಗಳ ಮರುಸ್ಥಾಪನೆ, ಬಡ್ತಿ ಪ್ರಕ್ರಿಯೆ ವೇಗಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿರುವುದನ್ನು ಸ್ಮರಿಸಿದ ಅವರು, ಇದರಿಂದ ಶಿಕ್ಷಕರಲ್ಲಿ ಹೊಸ ಆತ್ಮವಿಶ್ವಾಸ ಮೂಡಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ನಾಗೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ನಾಗೇಶ್ ಚೇತನ್ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ತಾಲೂಕು ಅಧ್ಯಕ್ಷ ಬಸವರಾಜ್ ಮಾತನಾಡಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಈ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶವು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾಗಲಿದೆ ಎಂದರು. ತಾಲೂಕಿನ ಬಹುತೇಕ ಶಿಕ್ಷಕರ ಸಮಸ್ಯೆಗಳಿಗೆ ಈಗಾಗಲೇ ಪರಿಹಾರ ಕಂಡುಕೊಂಡಿದ್ದು, ಎಲ್ಲರೂ ಒಗ್ಗಟ್ಟಾಗಿ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ತಾಲೂಕು ಕಾರ್ಯದರ್ಶಿ ದೊರೇಶ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಎಲ್‌ಡಿಆರ್ ನಿಯಮಗಳು ದೊಡ್ಡ ಸಮಸ್ಯೆಯಾಗಿದ್ದವು. ಈ ನಿಯಮಗಳಿಂದ ಬಡ್ತಿ ಪ್ರಕ್ರಿಯೆ ಸ್ಥಗಿತಗೊಂಡು ಸಾವಿರಾರು ಶಿಕ್ಷಕರು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತಾಗಿತ್ತು. ಈ ಅನ್ಯಾಯದ ವಿರುದ್ಧ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ ಸರ್ಕಾರದ ಗಮನ ಸೆಳೆದ ಪರಿಣಾಮ, ಸರ್ಕಾರ ಮಾನವೀಯ ದೃಷ್ಟಿಕೋನದಿಂದ ಸಿಎಲ್‌ಡಿಆರ್ ನಿಯಮಗಳಿಗೆ ಸಡಿಲಿಕೆ ನೀಡಿದ್ದು, ಬಡ್ತಿ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ ಎಂದು ಹೇಳಿದರು.ಈ ನಿರ್ಣಯದಿಂದ ರಾಜ್ಯದ ಸುಮಾರು ಒಂದು ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಲಾಭವಾಗಿದ್ದು, ಶಿಕ್ಷಕರಲ್ಲಿ ಹೊಸ ಉತ್ಸಾಹ ಹಾಗೂ ಆತ್ಮವಿಶ್ವಾಸ ಮೂಡಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.