ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಹುಣಶ್ಯಾಳ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಹಾಗೂ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ತಾಲೂಕಿನ ಹುಣಶ್ಯಾಳ ಗ್ರಾಮದ ಶಾಲಾ ಆವರಣದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಕಲಕೇರಿ ಟಿಇಎಂ ಉರ್ದು ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಬಿ.ಡಿ. ಬಾಣಕಾರ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಯ ಆದೇಶ ಹಾಗೂ ನಿರ್ದೇಶನದಂತೆ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಕ್ರಮದಂತೆ ಎಲ್ಲ ಸೌಲಭ್ಯಗಳ ಮೂಲಕ ಗ್ರಾಮದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದೆ. ಈ ಭಾಗದ ಪಾಲಕರು, ಶಿಕ್ಷಣ ಪ್ರೇಮಿಗಳು ಇದರ ಸದುಪಯೋಗ ಪಡೆದು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದುಕೊಳ್ಳುವುದರ ಮೂಲಕ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಬೇಕು. ಈಗಾಗಲೇ ೨೦ಕ್ಕೂ ಹೆಚ್ಚು ಮಕ್ಕಳು ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪ್ರವೇಶ ಪಡೆದುಕೊಂಡಿದ್ದು, ತರಗತಿಗಳು ಪ್ರಾರಂಭವಾಗಲು ಈ ಶಾಲೆಯ ಮುಖ್ಯಶಿಕ್ಷಕರು, ಈ ಭಾಗದ ಸಿಆರ್‌ಪಿ ಅವರ ಸಹಕಾರ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.

ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಿಗೆ ಪ್ರವೇಶ ಪಡೆದ ಎಲ್ಲ ಮಕ್ಕಳಿಗೆ ಬ್ಯಾಗ್, ಪುಟ್‌ಬುಕ್ಸ್, ಹಾಗೂ ಪೆನ್ಸಿಲ್‌ಗಳನ್ನು ಮೊಹಮ್ಮದ್ ಶಫೀಕ್ ಸಿಪಾಯಿ ಉಚಿತವಾಗಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್‌ಗಣಿ ತಿಂಥಣಿ ವಹಿಸಿದ್ದರು. ಕಲಕೇರಿ ಉರ್ದು ಕ್ಲಸ್ಟರ್ ಸಿಆರ್‌ಪಿ ಅಬ್ಬಾಸ್ ಮಣ್ಣೂರ, ಮುಖ್ಯಶಿಕ್ಷಕ ಆದಮ್ ಸಾಲೋಡಗಿ, ಅಹ್ಮದ್ ಹುಸೇನ್ ಮೋಮಿನ್, ಎಸ್.ಬಿ.ಬಂಗಾರಗುಂಡ, ಶರಣಪ್ಪ ಪಡಶೆಟ್ಟಿ, ಪೀರಮಹ್ಮದ ಸಿಪಾಯಿ, ಎಸ್.ಬಿ.ಬಡೇಘರ ಹಾಗೂ ಪಾಲಕರು ಇದ್ದರು.