ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಬೆಳಗಾವಿ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ಒಳಹರಿವು ನಿರಂತರ ಏರಿಕೆಯಾಗುತ್ತಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ತಲೆದೋರಿದೆ.ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಸುಮಾರು 1 ಲಕ್ಷ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಮೂಲಕ ಒಂದೇ ದಿನದಲ್ಲಿ 14 ಸಾವಿರ ಕ್ಯುಸೆಕ್ ನೀರು ಏರಿಕೆಯಾಗಿದೆ. ಮಂಗಳವಾರ ಸುಮಾರು 1.11 ಲಕ್ಷ ಕ್ಯೂಸೆಕ್ ನೀರಿನ ಒಳಹರಿವಿತ್ತು. ಹೆಚ್ಚಿದ ನೀರಿನ ಹರಿವಿನಿಂದ ಕಲ್ಲೋಳದ ದತ್ತ ಮಂದಿರಕ್ಕೆ ನದಿಯ ನೀರು ನುಗ್ಗಿದ್ದು, ನದಿತೀರದ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.ಹುಕ್ಕೇರಿ ತಾಲೂಕಿನ ಘಟಪ್ರಭಾ ನದಿಗೆ ಸುಮಾರು 26 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಇದು ಕೂಡ ಒಂದೇ ದಿನದಲ್ಲಿ ಸುಮಾರು 4 ಸಾವಿರ ಕ್ಯೂಸೆಕ್ ಹೆಚ್ಚಳವಾಗಿದೆ. ಖಾನಾಪುರ ತಾಲೂಕಿನ ಮಲಪ್ರಭಾ ನದಿಗೂ ಸುಮಾರು 13 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಒಂದೇ ದಿನದಲ್ಲೇ ಸುಮಾರು 8 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ನೀರಾವರಿ ಇಲಾಖೆ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಿದೆ.ಜಲಪಾತಗಳಿಗೆ ನಿರ್ಬಂಧ:
ಇತ್ತ ಬೆಳಗಾವಿ ಜಿಲ್ಲೆಯ ಒಂಬತ್ತು ಜಲಪಾತಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸುಂಡಿ ಹಾಗೂ ಕಿಟವಾಡ ಜಲಪಾತಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅಪಾಯದ ನಡುವೆಯೂ ಕೆಲ ಪ್ರವಾಸಿಗರು ಜಲಪಾತದ ಸಮೀಪ ತೆರಳಿ ಸಾಹಸ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ.ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಿಂದ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಪೂರೈಕೆ ಸಮಸ್ಯೆ ಮುಂದುವರಿದಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಡಂಚಿನ ಗ್ರಾಮಗಳಿಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸಬೇಕು ಹಾಗೂ ಕಣಕುಂಬಿಯಲ್ಲಿ ಪ್ರತ್ಯೇಕ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದಲ್ಲೂ ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದು, ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ರಸ್ತೆಗಳು ಕೆರೆಯಂತಾಗಿರುವುದರಿಂದ ಗ್ರಾಮಸ್ಥರು ಜೀವಭಯದಲ್ಲಿ ಓಡಾಡುವಂತಾಗಿದೆ. ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಳಗಾವಿ ನಗರದಲ್ಲಿ ತಗ್ಗಿದ ಮಳೆ:ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಬುಧವಾರ ಬೆಳಗಾವಿ ನಗರದಲ್ಲಿ ತುಸು ತಗ್ಗಿದ್ದು, ಬೆಳಗ್ಗೆಯಿಂದ ಮಧ್ಯೆ ಮಧ್ಯೆ ಬಿಸಿಲು ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಬುಧವಾರ ಮಳೆ ತಗ್ಗಿದ್ದು, ಜನತೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಆದರೆ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರಿದಿರುವುದರಿಂದ ಜಿಲ್ಲೆಯ ನದಿಗಳ ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.ಖಾನಾಪುರದಲ್ಲಿ ಅತಿ ಹೆಚ್ಚು ಮಳೆ:ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕಳೆದ ಕೆಲವು ದಿನಗಳಿಂದ ಹಲವು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಜುಲೈ 1ರಿಂದ 8ರವರೆಗೆ ಜಿಲ್ಲೆಯಲ್ಲಿ ಸರಾಸರಿ 146.3 ಮಿ.ಮೀ. ಮಳೆ ದಾಖಲಾಗಿದೆ.ತಾಲೂಕುವಾರು ಮಳೆ ಪ್ರಮಾಣದಲ್ಲಿ ಖಾನಾಪುರ ಮೊದಲ ಸ್ಥಾನದಲ್ಲಿದ್ದು, ಜುಲೈ 1ರಿಂದ 8ರವರೆಗೆ 381.1 ಮಿ.ಮೀ. ಮಳೆಯಾಗಿದೆ. ಕಿತ್ತೂರು ತಾಲೂಕಿನಲ್ಲಿ 201.2 ಮಿ.ಮೀ., ನಿಪ್ಪಾಣಿಯಲ್ಲಿ 159.5 ಮಿ.ಮೀ., ಹುಕ್ಕೇರಿಯಲ್ಲಿ 91.2 ಮಿ.ಮೀ., ಬೆಳಗಾವಿ ತಾಲೂಕಿನಲ್ಲಿ 98.7 ಮಿ.ಮೀ., ಗೋಕಾಕದಲ್ಲಿ 76.7 ಮಿ.ಮೀ., ರಾಮದುರ್ಗದಲ್ಲಿ 73.3 ಮಿ.ಮೀ., ರಾಯಬಾಗದಲ್ಲಿ 74.5 ಮಿ.ಮೀ., ಸವದತ್ತಿಯಲ್ಲಿ 90.5 ಮಿ.ಮೀ., ಕಾಗವಾಡದಲ್ಲಿ 102.5 ಮಿ.ಮೀ., ಮೂಡಲಗಿಯಲ್ಲಿ 79.1 ಮಿ.ಮೀ. ಹಾಗೂ ಯರಗಟ್ಟಿಯಲ್ಲಿ 85.4 ಮಿ.ಮೀ. ಮಳೆ ದಾಖಲಾಗಿದೆ.ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 6.3 ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ಖಾನಾಪುರದಲ್ಲಿ 21.5 ಮಿ.ಮೀ., ಕಿತ್ತೂರಿನಲ್ಲಿ 9.1 ಮಿ.ಮೀ., ಹುಕ್ಕೇರಿಯಲ್ಲಿ 7.0 ಮಿ.ಮೀ., ನಿಪ್ಪಾಣಿಯಲ್ಲಿ 6.9 ಮಿ.ಮೀ. ಹಾಗೂ ಚಿಕ್ಕೋಡಿಯಲ್ಲಿ 5.2 ಮಿ.ಮೀ. ಮಳೆ ದಾಖಲಾಗಿದೆ.ಜೂನ್ 1ರಿಂದ ಜುಲೈ 8ರವರೆಗೆ ಜಿಲ್ಲೆಯಲ್ಲಿ ಒಟ್ಟು 192.5 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯವಾಗಿ ದಾಖಲಾಗುವ 211.4 ಮಿ.ಮೀ.ಗೆ ಹೋಲಿಸಿದರೆ ಶೇ. 10ರಷ್ಟು ಕಡಿಮೆಯಾಗಿದೆ. ನಿರಂತರ ಮಳೆಯ ಪರಿಣಾಮ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲೂ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.