ಶಿವಾನಂದ ಗೊಂಬಿ
ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರಾಯರ ಭಕ್ತರ ಸಂಖ್ಯೆ ಜಾಸ್ತಿ. ಜತೆಗೆ ರಾಜ್ಯದ ದೊಡ್ಡ ನಗರ ಎನಿಸಿರುವ ಹುಬ್ಬಳ್ಳಿಯಲ್ಲೇ ನೈಋತ್ಯ ವಲಯದ ಕೇಂದ್ರ ಕಚೇರಿ ಇದೆ. ಆದರೂ ಕೂಡ ಈ ಭಾಗದಿಂದ ಒಂದೇ ಒಂದು ರೈಲು ಮಂತ್ರಾಲಯಂ ರೋಡ್ (ಸ್ಟೇಷನ್)ಗೆ ಇಲ್ಲ.
ಹಾಗಂತ ಮುಂಚೆ ಇರಲಿಲ್ಲ ಅಂತೇನೂ ಇಲ್ಲ. ಕೊರೋನಾಕ್ಕಿಂತ ಮುಂಚೆ ಧಾರವಾಡದಿಂದ ಮಂತ್ರಾಲಯಂ ರೋಡ್‌ಗೆ ರೈಲು ಇತ್ತು. ಬಳಿಕ ಇದನ್ನೇ ಬೆಳಗಾವಿಯಿಂದಲೂ ಓಡಿಸಲಾಗುತ್ತಿತ್ತು.ಜತೆಗೆ ಕೊಪ ಮುಗುರು ಎಕ್ಸ್‌ಪ್ರೆಸ್ ಎಂಬ ರೈಲು ಇತ್ತು. ಇದು ಶಾಹು ಮಹಾರಾಜ್ ಸ್ಟೇಷನ್‌ನಿಂದ ತೆಲಂಗಾಣದ ಮುನುಗುರುಗೆ ರೈಲು ಸಂಚಾರವಿತ್ತು. ಇದು ಕೂಡ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಮೂಲಕ ಮಂತ್ರಾಲಯಂ ರೋಡ್ ಸ್ಟೇಷನ್‌ಗೆ ತೆರಳುತ್ತಿತ್ತು. ಆದರೆ, ಇದು ಕೂಡ ಇದೀಗ ಇಲ್ಲ.
ಕೊರೋನಾ ಮುಗಿದ ಬಳಿಕ ಸ್ಥಗಿತಗೊಂಡಿದ್ದ ಉಳಿದ ಎಲ್ಲ ರೈಲುಗಳ ಸಂಚಾರ ಪುನಾರಂಭಗೊಳಿಸಲಾಯಿತು. ಆದರೆ ಅದೇಕೋ ಏನೋ ಮಂತ್ರಾಲಯಂ ರೋಡ್‌ಗೆ ಸಂಪರ್ಕಿಸುವ ರೈಲು ಮಾತ್ರ ಪುನಾರಂಭಗೊಳ್ಳಲೇ ಇಲ್ಲ.
ಹಾಗಂತ ಈ ರೈಲಿಗೆ ಹೋಗುವ ಭಕ್ತರ ಸಂಖ್ಯೆಯೇನೂ ಕಮ್ಮಿಯಿಲ್ಲ. ಏಕೆಂದರೆ ಮಂತ್ರಾಲಯಕ್ಕೆ ಹೋಗಬೇಕೆಂದರೆ ಬಸ್‌ಗಿಂತ ರೈಲು ಪಯಣ ಅನುಕೂಲಕರ ಎಂಬುದರಲ್ಲಿ ಎರಡು ಮಾತಿಲ್ಲ. ಬಸ್‌ನಲ್ಲಿ ಹೋದರೆ ನೇರವಾಗಿ ದೇವಸ್ಥಾನದ ಎದುರಿಗೆ ಹೋಗುತ್ತದೆ. ರೈಲ್ವೆ ಸ್ಟೇಷನ್ ಮಂತ್ರಾಲಯ ದೇವಸ್ಥಾನದಿಂದ 15 ಕಿಮೀ ದೂರದಲ್ಲಿದೆ. ಆದರೂ ಮಕ್ಕಳು, ವೃದ್ಧರನ್ನು ಕರೆದುಕೊಂಡು ಹೋಗಬೇಕೆಂದರೆ ರೈಲು ಪ್ರಯಾಣವೇ ಹೆಚ್ಚು ಅನುಕೂಲ ಹಾಗೂ ಸುರಕ್ಷಿತ ಎಂಬುದು ನಾಗರಿಕರ ಅಂಬೋಣ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಅಥವಾ ಹುಬ್ಬಳ್ಳಿಯಿಂದ ಮಂತ್ರಾಲಯಂ ರೋಡ್‌ಗೆ ನೇರವಾಗಿ ರೈಲು ಸಂಪರ್ಕ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಹಾವೇರಿ- ಗದಗ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಈ ಭಾಗದ ಸಂಸದರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಜೋಶಿ, ಶೆಟ್ಟರ್ ಮನಸು ಮಾಡಿದರೆ ಇದೇನು ಕಷ್ಟದ ಮಾತಲ್ಲ ಎಂಬುದು ಭಕ್ತರ ಅಭಿಮತ.ಒಟ್ಟಿನಲ್ಲಿ ಉತ್ತರ ಕರ್ನಾಟಕದಿಂದ ಮಂತ್ರಾಲಯಂಕ್ಕೆ ರೈಲು ಸಂಪರ್ಕ ಮಾಡಬೇಕು ಎಂಬುದು ನಾಗರಿಕರ ಆಗ್ರಹ. ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!.