ಧಾರವಾಡ:
ರಾಯಾಪುರದ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿದ ಅವರು, ವಿಜ್ಞಾನ ಪ್ರದರ್ಶನ ಕೇವಲ ಮಾದರಿಗಳ ಪ್ರದರ್ಶನವಲ್ಲ. ಇದು ಸೃಜನಶೀಲತೆ ಮತ್ತು ಕುತೂಹಲದ ಹಬ್ಬ. ವಿದ್ಯಾರ್ಥಿಗಳು ತಮ್ಮ ಕಲ್ಪನೆ, ಪರಿಶ್ರಮ ಮತ್ತು ವೈಜ್ಞಾನಿಕ ಚಿಂತನೆಯುಳ್ಳ ನವೀನ ಆಲೋಚನೆಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ ಎಂದರು.
ವಸ್ತು ಪ್ರದರ್ಶನದಲ್ಲಿ ಗಮನಿಸುತ್ತೀರಿ, ಪ್ರಶ್ನಿಸುತ್ತೀರಿ, ಊಹಿಸುತ್ತೀರಿ, ಪ್ರಯೋಗ ಮಾಡುತ್ತೀರಿ ಮತ್ತು ಕಂಡು ಹಿಡಿಯುತ್ತೀರಿ. ಈ ಪ್ರಕ್ರಿಯೆಯೇ ನಿಮಗೆ ಆತ್ಮವಿಶ್ವಾಸ ನೀಡುತ್ತದೆ ಮತ್ತು ಸಮಸ್ಯೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಶಕ್ತಿ ನೀಡುತ್ತದೆ ಎಂದು ಹೇಳಿದರು.ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ವಿಜ್ಞಾನ ವಿಷಯವು ಪಾಠ-ಪುಸ್ತಕಗಳಲ್ಲಿ ಮಾತ್ರ ಸೀಮಿತವಾಗಿಲ್ಲ. ದಿನನಿತ್ಯದ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ವಿಜ್ಞಾನವಿದೆ. ನಮ್ಮ ಆಧುನಿಕ ಬದುಕು ವಿಜ್ಞಾನದ ಕೊಡುಗೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಕುತೂಹಲ ಪ್ರೋತ್ಸಾಹಿಸಬೇಕು. ಅವರಿಗೆ ಪ್ರಯೋಗ ಮಾಡಲು ಅವಕಾಶ ನೀಡಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಸತತವಾಗಿ ಕಲಿಯಿರಿ, ಕಲ್ಪನೆ ಮಾಡಿ ಮತ್ತು ಪ್ರಯೋಗಗಳನ್ನು ಮುಂದುವರಿಸಿ. ಶಿಕ್ಷಕರು ಮಕ್ಕಳನ್ನು ವೈಜ್ಞಾನಿಕ ಮನೋಭಾವದತ್ತ ದಾರಿ ತೋರುತ್ತಿರುವ ಕಾರ್ಯವು ಅವರನ್ನು ಭವಿಷ್ಯದ ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಪರಿಸರ ಕ್ಷೇತ್ರದ ತಜ್ಞರನ್ನಾಗಿ ರೂಪಿಸಬಲ್ಲದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಚಾರ್ಯ ಬಸವರಾಜ ನಾಲತವಾಡ ಮಾತನಾಡಿ, ವಿಜ್ಞಾನ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತದೆ. ಪ್ರಶ್ನಿಸಲು ಮತ್ತು ಉತ್ತರ ಕಂಡುಹಿಡಿಯಲು ಧೈರ್ಯ ನೀಡುತ್ತದೆ. ಕಲ್ಪನೆ ಮತ್ತು ಜ್ಞಾನವನ್ನು ನೈಜ ಜೀವನಕ್ಕೆ ಸಂಪರ್ಕಿಸುತ್ತದೆ. ಟೀಮ್‌ವರ್ಕ್ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸುತ್ತದೆ. ಹೊಸ ಆವಿಷ್ಕಾರಗಳತ್ತ ವಿದ್ಯಾರ್ಥಿಗಳನ್ನು ತೆಗೆದುಕೊಂಡು ಹೋಗುತ್ತದೆ ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಸ್ವಾಗತಿಸಿದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ದೀಪಕ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಗಾಯತ್ರಿ ಜೋಶಿ ಪ್ರಾರ್ಥಿಸಿದರು. ಡಯಟ್ ಉಪನಿರ್ದೇಶಕ ಗಿರೀಶ ಪದಕಿ ಮತ್ತಿತರರು ಇದ್ದರು.