ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕಳೆದ ಆರು ದಿನಗಳ ಕಾಲ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಬ್ಬರಿಸಿ ಜನಜೀವನ ಅಸ್ತವ್ಯಸ್ತಗೊಳಿಸಿದ ಮಳೆ ಶನಿವಾರದಿಂದ ತಗ್ಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.ಶುಕ್ರವಾರ ಸಂಜೆ ಬಳಿಕ ಮಳೆ ಸಾಧಾರಣ ಪ್ರಮಾಣದಲ್ಲಿ ಬಿಡುವು ನೀಡಿದ್ದರೂ ಪೂರ್ಣ ಕಡಿಮೆಯಾಗಿರಲಿಲ್ಲ. ಆದರೆ ಶನಿ ವಾರ ಬೆಳಗಿನ ನಂತರ ಮಳೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಜನ ಜೀವನ ಮಾಮೂಲಿನಂತಾಗಿದೆ. ಶನಿವಾರ ಒಂದೆರಡು ಬಾರಿ ಮಾತ್ರ ಸಣ್ಣ ಪ್ರಮಾಣದಲ್ಲಿ ಮಳೆ ಬಂದಿತ್ತು.ಮಳೆ ಕಡಿಮೆಯಾಗಿದ್ದರೂ ಕೂಡ ಹಾನಿ ಮುಂದುವರೆದಿದ್ದು, ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳೀಕೊಪ್ಪ ಕೈಮರದ ಬಸ್ ನಿಲ್ದಾಣದ ಸಮೀಪದಲ್ಲಿ ಇರುವ ವಿದ್ಯುತ್ ಲೈನ್ ಹಾಗೂ ವಿದ್ಯುತ್ ಪರಿವರ್ತಕದ ಮೇಲೆ ಹೆಬ್ಬಲಸಿನ ಮರ ವೊಂದು ಶನಿವಾರ ಬೆಳಗಿನ ಜಾವ ಮುರಿದು ಬಿದ್ದಿದ್ದು ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ.ಮರ ಮುರಿದು ಬಿದ್ದ ಪರಿಣಾಮ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕುಡಿಯುವ ನೀರು ಸರಬರಾಜಿಗೂ ತೊಂದರೆಯಾಗಿದೆ. ಮೇಲ್ಪಾಲ್ ರಸ್ತೆ ಅರಳೀಕೊಪ್ಪ ಕೈಮರ-ಎಮ್ಮೇನಹಡ್ಲು ಬಳಿ ಶುಕ್ರವಾರ ರಾತ್ರಿ ಮಳೆ ಗಾಳಿಗೆ ತಾರೆ ಮರವೊಂದು ಬುಡ ಸಮೇತ ಧರೆಗುರುಳಿದ್ದು, ಟ್ರ್ಯಾಕ್ಟರ್ ಒಂದು ಕ್ಷಣ ಮಾತ್ರದಲ್ಲಿ ಅಪಾಯದಿಂದ ಪಾರಾಗಿದೆ. ಮರ ಉರುಳು ವುದನ್ನು ಅರಿತ ಟ್ರ್ಯಾಕ್ಟರ್ ಚಾಲಕ ವಾಹನವನ್ನು ಬದಿಗೆ ಚಲಾಯಿಸಿಕೊಂಡು ಹೋಗಿದ್ದು ಬಾರೀ ಅನಾಹುತ ತಪ್ಪಿದೆ. ಬಳಿಕ ಸ್ಥಳೀಯರು ರಾತ್ರಿಯೇ ಮುಖ್ಯರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ.ಮಳೆ, ಗಾಳಿ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಲೈನ್, ಕಂಬಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೇ ಜನ ಕತ್ತಲೆಯಲ್ಲಿದ್ದಾರೆ. ಮೆಸ್ಕಾಂ ಸಿಬ್ಬಂದಿ ಸಹ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.೨೦ಬಿಹೆಚ್‌ಆರ್ ೧:
ಬಾಳೆಹೊನ್ನೂರು ಸಮೀಪದ ಅರಳೀಕೊಪ್ಪ ಕೈಮರದಲ್ಲಿ ವಿದ್ಯುತ್ ಪರಿವರ್ತಕ, ಲೈನ್ ಮೇಲೆ ಮರ ಬಿದ್ದು ಹಾನಿಯಾಗಿರುವುದು.