ಮಹೇಂದ್ರ ದೇವನೂರು
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ದೊಡ್ಡಬಳ್ಳಾಪುರ ತಾಲೂಕಿನ ಐತಿಹಾಸಿಕ ರಾಜಘಟ್ಟ ಗ್ರಾಮದಲ್ಲಿ ನಡೆದ 3ನೇ ಹಂತದ ವೈಜ್ಞಾನಿಕ ಉತ್ಖನನದಲ್ಲಿ ಬೌದ್ಧ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಅತ್ಯಂತ ಮಹತ್ವದ ಹಾಗೂ ವಿಶಿಷ್ಟ ಆವಿಷ್ಕಾರವಾಗಿದೆ.
2026ರ ಜನವರಿ 8ರಿಂದ ಹಮ್ಮಿಕೊಂಡಿರುವ 3ನೇ ಹಂತದ ವೈಜ್ಞಾನಿಕ ಉತ್ಖನನದಲ್ಲಿ ಇದು ಪತ್ತೆಯಾಗಿದೆ. ಬೌದ್ಧ ವಿಹಾರದ ಪಶ್ಚಿಮ ಭಾಗದ ಶೋಧನೆಯಲ್ಲಿ ಚೈತ್ಯಾಲಯದ ಪಶ್ಚಿಮ ಭಾಗದಲ್ಲಿದ್ದ ದಕ್ಷಿಣೋತ್ತರವಾಗಿ ನಿರ್ಮಾಣವಾದ 3-4 ಕೊಠಡಿಗಳ ಸಾಲುಗಳು ಪತ್ತೆಯಾಗಿವೆ. ಇವುಗಳ ಮುಂಭಾಗದಲ್ಲಿ ಕಂಬಗಳ ಸಾಲುಳ್ಳ ಚಾವಡಿ ಅಥವಾ ‘ಚಂಕಮಶಾಲೆ’ ಇದ್ದುದರ ಸ್ಪಷ್ಟ ಸೂಚನೆ.ಇಟ್ಟಿಗೆ ಚೋರಿನ ಹಾವಳಿಯಿಂದಾಗಿ ಕೆಲವು ಗೋಡೆಗಳು ತಳಪಾಯದವರೆಗೂ ನಾಶವಾಗಿದ್ದರೂ, ಕಟ್ಟಡದ ಮೂಲ ಸ್ವರೂಪ ಗುರುತಿಸಲು ಬೇಕಾದ ಸ್ಪಷ್ಟ ಕುರುಹು ದೊರಕಿದೆ. ಅತ್ಯಂತ ಅಪರೂಪದ ನಿಂಬೆ ಗಾತ್ರದ ಮಣ್ಣಿನ ಗೋಳ ಸ್ತೂಪಿಕೆ: 2001ರ ಉತ್ಖನನದಲ್ಲಿ ಅಚ್ಚಿನಿಂದ ಮಾಡಿದ ನೂರಾರು ಮಣ್ಣಿನ ಬೌದ್ಧ ಸ್ತೂಪಿಕೆ ದೊರೆತಿದ್ದವು. ಆದರೆ, ಪ್ರಸಕ್ತ ವರ್ಷದ ಉತ್ಖನನದಲ್ಲಿ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನಿಂಬೆ ಗಾತ್ರದ ತೀರ ಚಿಕ್ಕದಾದ ಮಣ್ಣಿನ ಸ್ತೂಪಿಕೆ (ಗೋಳ) ಪತ್ತೆಯಾಗಿದೆ. ಸನ್ನತಿಯಲ್ಲಿ ಇಂತಹ ಹರಕೆಯ ಸ್ತೂಪಗಳು ಸಣ್ಣ ಕಲ್ಲಿನಲ್ಲಿ ಕೆತ್ತಿದ ರೂಪದಲ್ಲಿ ದೊರೆತಿವೆ. ಆದರೂ ಮಣ್ಣಿನಲ್ಲಿ ತಯಾರಿಸಿದ ಇಷ್ಟು ಸಣ್ಣ ಗಾತ್ರದ ಗೋಳಾಕಾರದ ಸ್ತೂಪಿಕೆ ದೊರೆತಿರುವುದು ರಾಜಘಟ್ಟದಲ್ಲೇ ಪ್ರಥಮ ಹಾಗೂ ಇಡೀ ಭಾರತದಲ್ಲಿ ಬೇರೆಲ್ಲೂ ಇಂತಹ ನಿದರ್ಶನ ಕಂಡುಬಂದಿಲ್ಲ.
ಭಿಕ್ಷುಗಳು ತೈಲ, ಮುಲಾಮು ಅಥವಾ ಔಷಧ ಇಟ್ಟುಕೊಳ್ಳಲು ಬಳಸುತ್ತಿದ್ದ ಸಾಧಾರಣ ತಯಾರಿಕೆಯ ಸಣ್ಣ ಮಣ್ಣಿನ ಭರಣಿ ಹಾಗೂ ಕುಡಿಯುವ ನೀರಿನ ದಾನಿಯ ಅತ್ಯಂತ ಅಂದವಾದ ಕೆತ್ತನೆಯ ಕಂಠಭಾಗ ಪತ್ತೆಯಾಗಿದೆ. ಉತ್ಖನನದ ವಿವಿಧ ಹಂತಗಳಲ್ಲಿ ವಿಶಿಷ್ಟ ವಿನ್ಯಾಸಕ್ಕೆ ತಕ್ಕಂತೆ ವಿಶೇಷವಾಗಿ ತಯಾರಿಸಲಾದ ವಿವಿಧ ಗಾತ್ರದ ಮತ್ತು ಆಕಾರದ ಇಟ್ಟಿಗೆಗಳು (ಎಲ್-ಆಕಾರದ, ಕೋನೀಯ ಮತ್ತು ಅಲಂಕಾರಿಕ ಇಟ್ಟಿಗೆಗಳು) ಲಭ್ಯವಾಗಿವೆ.
ಹಿಂದಿನ ಉತ್ಖನನಗಳಲ್ಲಿ ರಾಜಘಟ್ಟದ ಬೂದಿಕುಂಡಿ ಪ್ರದೇಶದ ಬಳಿ ಇಟ್ಟಿಗೆಯಿಂದ ನಿರ್ಮಾಣವಾಗಿದ್ದ ಭವ್ಯ ಬೌದ್ಧ ಚೈತ್ಯಾಲಯ, ಅದರ ಪೂರ್ವ ದಿಕ್ಕಿನಲ್ಲಿದ್ದ ವಿಹಾರದ ಸಾಲು ಕೊಠಡಿ ಮತ್ತು ಪ್ರಾಕಾರದ ಗೋಡೆ ಶೋಧಿಸಲಾಯಿತು. ಆದರೆ, ಚೈತ್ಯಾಲಯದ ಮುಂಭಾಗದ ಗೋಡೆಯು ವಿನಾಶದ ಕಾರಣದಿಂದ ನಿರ್ಣಾಮವಾಗಿತ್ತು ಹಾಗೂ ಕಾರಣಾಂತರಗಳಿಂದ ಅದರ ಪಶ್ಚಿಮ ಭಾಗವನ್ನು ಶೋಧಿಸಲು ಸಾಧ್ಯವಾಗಿರಲಿಲ್ಲ . ಹಾಗಾಗಿ, ಚೈತ್ಯಾಲಯದ ಪಶ್ಚಿಮ ಭಾಗದ ಸುಪ್ತ ಕಟ್ಟಡ ಶೋಧಿಸುವುದೇ ಪ್ರಸಕ್ತ ವರ್ಷದ ಉತ್ಖನನದ ಮುಖ್ಯ ಉದ್ದೇಶ .
ರಾಜಘಟ್ಟದಲ್ಲಿನ ಬೌದ್ಧನೆಲೆ ಕುರಿತು ಉತ್ಖನನ ಮುಂದುವರೆದಿದೆ. ಅಲ್ಲಿ ದೊರೆತ ಎಲ್ಲಾ ವಸ್ತುಗಳನ್ನು ಸಂರಕ್ಷಿಸಲಾಗಿದೆ.