ಕನ್ನಡಪ್ರಭ ವಾರ್ತೆ ಕಾರವಾರ
ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಈ ಬಗ್ಗೆ ಆಧ್ಯಯನ ನಡೆಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶಾಸನದ ಮೊದಲ ಮತ್ತು ಅತ್ಯಂತ ಮಹತ್ವದ ವೈಶಿಷ್ಟ್ಯ ಅದರ ಲಿಪಿ ಸ್ವರೂಪದಲ್ಲಿದೆ. ಒಂದೇ ಕಾಲಘಟ್ಟಕ್ಕೆ ಸೇರಿದ ಏಕರೂಪದ ಅಕ್ಷರಗಳನ್ನು ಬಳಸದೆ, 8 ಶತಮಾನಗಳ ಲಿಪಿಪರಂಪರೆಯ ರೂಪಗಳನ್ನು ಒಂದೇ ಶಾಸನದಲ್ಲಿ ಬಳಸಿರುವುದು ಇದರ ಅನನ್ಯತೆ.ಈ ಶಾಸನದ ಕಾಲವನ್ನು ಕ್ರಿಶ ಸುಮಾರು 750ರ ಆಸುಪಾಸು ಎಂದು ನಿರ್ಧರಿಸಲಾಗಿದೆ. ಇದರ ಮತ್ತೊಂದು ವಿಶಿಷ್ಟತೆ ಅದರ ಸುತ್ತೋಲೆ ಮಾದರಿಯ ಒಕ್ಕಣೆ. ಈ ಶಾಸನವು ಒಂದು ನಿರ್ದಿಷ್ಟ ಕೃಷಿಭೂಮಿಯ ನೀರಾವರಿ ಬಳಕೆ, ಧಾನ್ಯೋತ್ಪಾದನೆ, ತೆರಿಗೆ ಹಂಚಿಕೆ, ಅಳತೆ–ಮಾಪನ, ಭೂಮಿಯ ಗಡಿ ಮತ್ತು ಕರ ಸಲ್ಲಿಸಿದ ಬಳಿಕ ಅನುಭವಿಸಬಹುದಾದ ಭೋಗಾಧಿಕಾರಗಳನ್ನು ನಿಗದಿಪಡಿಸಿದ ವ್ಯವಹಾರಿಕ ಕಟ್ಟಳೆ ಶಾಸನವಾಗಿದೆ.
ಇಂದಿನ ಮೂರೂರು ಗ್ರಾಮವು ನೀಲ್ಮನೆ, ಹಳವಳ್ಳಿ ಮತ್ತು ಕೋಣಾರೆ ಎಂಬ 3 ಪ್ರಮುಖ ಗ್ರಾಮವಿಭಾಗಗಳನ್ನು ಒಳಗೊಂಡಿದೆ. ಈ ಹೆಸರುಗಳು ಶಾಸನದಲ್ಲಿನ ಕೆಲವು ಪ್ರಾಚೀನ ಹೆಸರುಗಳೊಂದಿಗೆ ಸಂಬಂಧ ಹೊಂದಿರಬಹುದೆಂಬ ಮಹತ್ವದ ಸ್ಥಳನಾಮಿಕ ಸಾಧ್ಯತೆ ವ್ಯಕ್ತವಾಗಿದೆ. ನೀಲ್ಮನೆ ಎಂಬುದು ಹಿಂದಿನ ನೀರ್ಮನೆ ಎಂಬ ಹೆಸರಿನ ಅಪಭ್ರಂಶವಾಗಿರಬಹುದು. ನೀರ್ಮನೆ ಎಂಬ ಜಲಸಂಬಂಧಿತ ಹೆಸರು ಶಾಸನೋಕ್ತ “ಕಿಱುನೀರು” ಎಂಬ ನೀರಾವರಿ ವಲಯದೊಂದಿಗೆ ಅರ್ಥಸಂಬಂಧ ಹೊಂದಿದೆ. ಹಳವಳ್ಳಿಯ ಹಳ ಎಂಬದು ಹಳೆಯ ಪಳ ಎನ್ನುವುದರ ರೂಪ. ಇದು ಶಾಸನದಲ್ಲಿನ “ಪೞಚ” ಎಂಬ ರೂಪದೊಂದಿಗೆ ಧ್ವನಿಸಂಬಂಧ ಹೊಂದಿರಬಹುದಾಗಿದೆ. ಹೀಗಾಗಿ ಇಂದಿನ ಹಳವಳ್ಳಿ ಶಾಸನೋಕ್ತ ಪೞಚಕೊಳಿ ಪ್ರದೇಶದ ರೂಪಾಂತರಿತ ಹೆಸರಾಗಿರುವ ಸಾಧ್ಯತೆ ಇದೆ. ಇಂದಿನ ಕೋಣರೆ ಎಂಬ ಹೆಸರು ಶಾಸನದ ಕೊನೆಯ ಭಾಗದಲ್ಲಿ ಕಂಡುಬರುವ “ಕೊಹೋಳೆ” ಅಥವಾ “ಕೊಹೋಳಯಣ್ಪು” ಎಂಬ ರೂಪದೊಂದಿಗೆ ಸಂಬಂಧ ಹೊಂದಿರಬಹುದಾಗಿದೆ. ಈ ಸಂಬಂಧಗಳು ಇನ್ನೂ ಕ್ಷೇತ್ರಾಧ್ಯಯನ ಮತ್ತು ಹಳೆಯ ದಾಖಲೆಗಳ ಪರಿಶೀಲನೆಗೆ ಒಳಪಡಬೇಕಾದರೂ, ಇಂದಿನ ಮೂರೂರು ಗ್ರಾಮದ ಮೂರು ಒಳವಿಭಾಗಗಳಿಗೂ ಶಾಸನೋಕ್ತ ಹೆಸರುಗಳೊಂದಿಗೆ ಧ್ವನಿ ಅಥವಾ ಅರ್ಥಸಂಬಂಧ ದೊರೆಯುತ್ತಿರುವುದು ಗಮನಾರ್ಹವಾಗಿದೆ.
ಓದಲು ಅತ್ಯಂತ ಕಠಿಣ ಹಾಗೂ ಸವಾಲಿನದಾದ ಈ ಶಾಸನದ ಪಾಠವನ್ನು ಅಂತಿಮಗೊಳಿಸುವಲ್ಲಿ ಡಾ. ದೇವರಕೊಂಡಾರೆಡ್ಡಿ ಹಾಗೂ ಪ್ರೊ. ದೇವರಾಜಸ್ವಾಮಿ ಅವರ ಲಿಪಿಶಾಸ್ತ್ರೀಯ ಮಾರ್ಗದರ್ಶನ ಮಹತ್ವದ್ದಾಗಿತ್ತು ಎಂದು ಶ್ಯಾಮಸುಂದರ ಗೌಡ ತಿಳಿಸಿದ್ದಾರೆ.