ಪತ್ರಕರ್ತರು ಅದರಲ್ಲೂ ಗ್ರಾಮೀಣ ಪತ್ರಕರ್ತರು ತೀವ್ರ ಬಗೆಯ ಸಂಕಷ್ಟಗಳನ್ನು ಸದಾ ಎದುರಿಸುತ್ತಲೇ ಸಾಗಿದ್ದಾರೆ.

ಕೊಟ್ಟೂರು: ಶಾಸಕಾಂಗ, ಕಾರ್ಯಾಂಗಗಳು ತಮ್ಮ ಹದ್ದು ಮೀರಿದ ಅಧಿಕಾರ ದುರುಪಯೋಗವಾದಾಗ ಅವುಗಳನ್ನು ಎಚ್ಚರಿಸುವ ಸಮರ್ಥ ಕಾರ್ಯವನ್ನು ಪತ್ರಿಕಾ ರಂಗ ಮಾಡುತ್ತಾ ಬಂದಿದೆ. ಈ ಬಹು ಬಗೆಯ ಕಾರ್ಯವನ್ನು ಪತ್ರಿಕಾ ರಂಗ ಮಾಡುತ್ತಿದ್ದರೂ ಇದಕ್ಕೆ ಸಮರ್ಪಕವಾಗಿ ಸಲ್ಲಬೇಕಿರುವ ಯಾವ ಯೋಜನೆಗಳು ಜಾರಿಗೊಳ್ಳದೇ ಇರುವುದು ದೊಡ್ಡ ದುರಂತ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.ಪಟ್ಟಣದ ಮರುಳಸಿದ್ದೇಶ್ವರ ಕನ್ವೇಷನ್ ಹಾಲ್‌ನ ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಅದರಲ್ಲೂ ಗ್ರಾಮೀಣ ಪತ್ರಕರ್ತರು ತೀವ್ರ ಬಗೆಯ ಸಂಕಷ್ಟಗಳನ್ನು ಸದಾ ಎದುರಿಸುತ್ತಲೇ ಸಾಗಿದ್ದಾರೆ. ಅವರಿಗೊಂದು ಸೂಕ್ತ ಬಗೆಯ ನೆರವು ಒದಗಿಸುವ ಯಾವುದೇ ಯೋಜನೆ ಕೂಡಲೇ ಜಾರಿಗೊಳ್ಳದಿರುವುದು ಸರಿಯಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಗೌರವಧನ ನಿಗದಿ ಮಾಡಿ ನೀಡಲು ಮುಂದಾಗಬೇಕು ಎಂದರು.

ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯವಾದ ಖಾಲಿ ನಿವೇಶನವನ್ನು ಸ್ಥಳೀಯ ಆಡಳಿತ ಮಂಜೂರು ಮಾಡಿದರೆ ಅದರ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಿರುವ ಪೂರ್ಣ ಪ್ರಮಾಣದ ಅನುದಾನವನ್ನು ನೀಡುವ ಎಂದು ಭರವಸೆ ನೀಡಿದರು.

ಶಾಸಕ ಡಾ.ಎನ್.ಟಿ. ಶ್ರೀನಿವಾಸ ಮಾತನಾಡಿ, ಉಳಿದ ಎಲ್ಲ ರಂಗಗಳು ಬದ್ಧತೆಯಿಂದ ಹೊರಬಂದು ಕೆಲಸ ಮಾಡುತ್ತಿದ್ದರೆ ಪತ್ರಿಕಾ ರಂಗದಲ್ಲಿರುವವರು ಬದ್ಧತೆ ಮೈಗೂಡಿಸಿಕೊಂಡು ಈ ಘಳಿಗೆವರೆಗೂ ತಮ್ಮ ಅಸ್ತಿತ್ವದ ಅವಶ್ಯಕತೆಯನ್ನು ಪ್ರತಿ ಹಂತದಲ್ಲೂ ಸಾಬೀತುಪಡಿಸುತ್ತ ಬಂದಿದ್ದಾರೆ. ಹರಿತವಾದ ಲೇಖನ ಉತ್ತಮ ಸಮಾಜ ನಿರ್ಮಾಣಕ್ಕೆ ಖಂಡಿತ ಬಳಕೆಯಾಗುವಂತಾಗಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಸ್. ಗೋರವರ ಮಾತನಾಡಿ, ಪತ್ರಿಕೋದ್ಯಮ ಮತ್ತು ರಂಗ ಸ್ವತಂತ್ರ್ಯವಾದಷ್ಟು ಸಂವಿಧಾನ ಮತ್ತು ಆಡಳಿತ ಮತ್ತಷ್ಟು ಬಲಪಡೆದುಕೊಳ್ಳುತ್ತದೆ. ಮುದ್ರಣ ಮಾಧ್ಯಮ ಡಿಜಿಟಲ್, ಎಐ ಮತ್ತಿತರ ಹಲವು ಬಗೆಯ ಸವಾಲುಗಳ ಮಧ್ಯೆಯೂ ತನ್ನ ಆಸ್ತಿತ್ವವನ್ನು ಉಳಿಸಿಕೊಂಡು ಮೇಲುಗೈ ಸಾಧಿಸಿರುವುದು ಸ್ವಾಗತ ಬೆಳವಣಿಗೆ ಎಂದರು.

ಗ್ರಾಮೀಣ ಪತ್ರಕರ್ತರು ಜನಸಾಮಾನ್ಯರ ಸಮಸ್ಯೆಗಳನ್ನು ನಾಡಿಗೆ ಮತ್ತು ಸರ್ಕಾರ ಗುರುತಿಸುವಂತೆ ಮಾಡುತ್ತ ಬಂದಿರುವುದು ಆ ಮಾಧ್ಯಮದವರ ಕರ್ತವ್ಯ ಬದ್ಧತೆಯನ್ನು ಎತ್ತಿತೋರಿಸುತ್ತದೆ ಎಂದರು.

ಮುಖಂಡರಾದ ಎಂಎಂಜೆ ಶೋಬಿತ್, ಸಾವಜ್ಜಿ ರಾಜೇಂದ್ರ ಪ್ರಸಾದ್, ಡಾ.ವಿ.ಟಿ. ತಿಪ್ಪೇಸ್ವಾಮಿ, ಐ.ದಾರುಕೇಶ, ಬದ್ದಿ ದುರುಗೇಶ, ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ವಿಕ್ರಮ್ ನಂದಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಕೊಟ್ಟೂರು ಅಧ್ಯಕ್ಷ ಪಂಪಾಪತಿ ಅಂಗಡಿ, ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಸಿ.ಕೆ. ನಾಗರಾಜ, ಉಜ್ಜಿನಿ ರುದ್ರಪ್ಪ, ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ, ತಾಲೂಕು ಅಧ್ಯಕ್ಷ ಬದ್ದಿ ಮಂಜುನಾಥ, ಕಾರ್ಯದರ್ಶಿ ಬಂದಾತರ ಪ್ರಕಾಶ, ಜಿಲ್ಲಾ ಕಾರ್ಯದರ್ಶಿ ಎಂ.ರವಿಕುಮಾರ, ಟಿ.ಹನುಮಂತಪ್ಪ, ಎನ್.ಭರಮಪ್ಪ, ಕಡ್ಲಿ ವೀರೇಶ, ನಿಂಬಳಗೆರೆ ಕಲ್ಲೇಶ ಇದ್ದರು. ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿವಿಧ ರಂಗದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುಂಚೆ ಹಂಸಪ್ರಿಯ ನೃತ್ಯಕೇತನ, ಶಾಲಾ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ, ನಾದಲಹರಿ ಸಂಗೀತ ಶಾಲಾ ಮಕ್ಕಳಿಂದ ಸಂಗೀತ ಗಾಯನ ನಡೆಯಿತು. ಎಸ್.ಎಂ.ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.