ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಜಯನಗರ ಬಡಾವಣೆಯ ಶತಾಯುಷಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಮ್ಮಪ್ಪಶೆಟ್ಟರನ್ನು ಸ್ನೇಹಿತರ ಕೂಟದಿಂದ ಗೌರವಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿ ಸರಳ ಜೀವನ ನಡೆಸಿ ಪ್ರಗತಿಪರ ಕೃಷಿಕ, ಸಮಾಜಮುಖಿ ಚಿಂತನೆಯೊಂದಿಗೆ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ನೇಕಾರ ಕುರುಹಿನಶೆಟ್ಟಿ ಸಮಾಜದ ನೇತಾರ ತಮ್ಮಪ್ಪಶೆಟ್ಟಿ ಅವರು ಸಾರ್ಥಕ ನೂರು ವರ್ಷಗಳನ್ನು ಸಂಪೂರ್ಣಗೊಳಿಸುತ್ತಿದ್ದಾರೆ ಎಂದರು.
2025ರ ಜುಲೈ 25ಕ್ಕೆ 101ನೇ ವರ್ಷಕ್ಕೆ ತಮ್ಮಪ್ಪ ಶೆಟ್ಟಿ ಕಾಲಿಡುತ್ತಿದ್ದಾರೆ. ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಎಚ್.ಡಿ.ಚೌಡಯ್ಯ, ಹೊಳೆನರಸೀಪುರದ ಜಿ.ಪುಟ್ಟಸ್ವಾಮಿಗೌಡ, ಬಳ್ಳೇಕೆರೆ ಎಂ.ಪುಟ್ಟಸ್ವಾಮಿಗೌಡ ಹಾಗೂ ರಾಜ್ಯದ ಹಿರಿಯ ಸಹಕಾರಿ ಧುರೀಣರಾಗಿದ್ದ ಮಾಜಿ ಶಾಸಕ ಎಸ್.ಎಂ.ಲಿಂಗಪ್ಪ ಅವರ ಒಡನಾಡಿಯಾಗಿದ್ದ ತಮ್ಮಪ್ಪನವರು ತಮ್ಮ ಜೀವನದುದ್ದಕ್ಕೂ ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಸೇವೆ ಎಂಬ ಪದಕ್ಕೆ ಸಾರ್ಥಕತೆ ತಂದು ಕೊಟ್ಟಿದ್ದು ಇತರರಿಗೆ ಮಾದರಿಯಾದ ಜೀವನ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಅಭಿವೃದ್ಧಿಗೆ ಪುರಸಭೆ ಅಧ್ಯಕ್ಷರಾಗಿದ್ದ ಕೆ.ಜೆ.ಬೋರಲಿಂಗೇಗೌಡ, ಎಚ್.ಟಿ.ನಾರಾಯಣಶೆಟ್ಟಿ ಅವರ ಮಾರ್ಗದರ್ಶಕರಾಗಿ ಮಾದರಿ ಪಟ್ಟಣದ ನಿರ್ಮಾಣಕ್ಕೆ ತಮ್ಮ ಹೆಗಲು ನೀಡಿ ದುಡಿದಿದ್ದಾರೆ ಎಂದು ಸ್ಮರಿಸಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಮಾದರಿ ಕೃಷಿಕರಾಗಿ ಕೆಲಸ ಮಾಡಿರುವ ತಮ್ಮಪ್ಪ ಅವರ ಜೀವನದ ಆದರ್ಶಗಳನ್ನು ಇಂದಿನ ಯುವಜನರು ಕಡ್ಡಾಯವಾಗಿ ಪಾಲಿಸುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದು ಕರೆ ನೀಡಿದರು.
ಇಂದಿನ ಯುವಜನರು ಮಾನವತೆ ಹಾಗೂ ಸೇವೆಗೆ ಬೆಲೆ ನೀಡುತ್ತಿಲ್ಲ. ಶ್ರಮಪಡದೇ ಶ್ರೀಮಂತರಾಗಬೇಕು ಎಂಬ ಹಗಲುಗನಸನ್ನು ಬೆನ್ನುಹತ್ತಿದ್ದಾರೆ. ಇದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.