
ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ । ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 543 ಜನರಲ್ಲಿ ರೋಗ ಪತ್ತೆ
ಮಾರಕ ಎಂಡೋಸಲ್ಫಾನ್ ಕೀಟನಾಶಕ ನಿಷೇಧಗೊಂಡು ಬರೋಬ್ಬರಿ 30 ವರ್ಷ ಕಳೆದಿವೆ. ಆದರೂ ಕರಾವಳಿ ಜಿಲ್ಲೆಯಲ್ಲಿ ಇದರ ಕರಾಳ ಛಾಯೆ ಮಾಸಿಲ್ಲ ಎಂಬ ಆತಂಕಕಾರಿ ಸತ್ಯ ಇದೀಗ ಬಯಲಾಗಿದೆ. ಆರೋಗ್ಯ ಇಲಾಖೆ ಇತ್ತೀಚೆಗೆ ನಡೆಸಿದ ಮರು ಸಮೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 543 ಎಂಡೋಸಲ್ಫಾನ್ ಬಾಧಿತರು ಪತ್ತೆಯಾಗಿದ್ದಾರೆ ಎಂದು ಸ್ಕೋಡ್‌ವೇಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹೊಸದಾಗಿ ಪತ್ತೆಯಾದವರಲ್ಲಿ 177 ಪುರುಷರು, 144 ಮಹಿಳೆಯರು ಹಾಗೂ 132 ಗಂಡು, 98 ಹೆಣ್ಣು ಸೇರಿದಂತೆ 230 ಮಕ್ಕಳು ಒಳಗೊಂಡಿದ್ದಾರೆ ಎಂದು ತಿಳಿಸಿದರು. ಮೂರು ದಶಕಗಳ ಹಿಂದೆಯೇ ಎಂಡೋಸಲ್ಫಾನ್ ಬಳಕೆ ನಿಷೇಧಿಸಲಾಗಿದ್ದರೂ, ಇಂದಿಗೂ ಹುಟ್ಟುವ ಮಕ್ಕಳಲ್ಲಿ ಈ ರೋಗ ಕಂಡುಬರುತ್ತಿರುವುದು ಅತ್ಯಂತ ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆಯ ಮೇರೆಗೆ ಆರೋಗ್ಯ ಇಲಾಖೆ ಈ ಸಮೀಕ್ಷೆ ನಡೆಸಿತ್ತು. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾದ 1,554 ಎಂಡೋಸಲ್ಫಾನ್ ಬಾಧಿತರಿಗೆ ಸರ್ಕಾರದಿಂದ ಯುಡಿಐಡಿ ಮತ್ತು ಮಾಸಾಶನ ಸೌಲಭ್ಯ ನೀಡಲಾಗುತ್ತಿದೆ. ಇದೀಗ ಹೊಸದಾಗಿ ಪತ್ತೆಯಾದ 543 ಸಂತ್ರಸ್ತರು ಇಷ್ಟು ವರ್ಷದಿಂದ ಈ ಸೌಲಭ್ಯಗಳಿಂದ ವಂಚಿತರಾಗಿದ್ದು, ಅವರಿಗೂ ತಕ್ಷಣವೇ ಸರ್ಕಾರಿ ಸವಲತ್ತುಗಳು ಸಿಗುವಂತಾಗಬೇಕು ಎಂದು ಅವರು ಆಗ್ರಹಿಸಿದರು.
ಇನ್ನು ಎಂಡೋಸಲ್ಫಾನ್ ಬಾಧಿತರ ನೆರವಿಗೆ ಆರೋಗ್ಯ ಇಲಾಖೆ, ಸ್ಕೋಡ್ವೇಸ್ ಸಂಸ್ಥೆ ಹಾಗೂ ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಸಹಯೋಗದಲ್ಲಿ ಆಶಾಕಿರಣ ಎಂಬ ವಿನೂತನ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿ 18 ವರ್ಷದೊಳಗಿನ ಬಾಧಿತರ ಮನೆ ಬಾಗಿಲಿಗೆ ತೆರಳಿ, ಅವರನ್ನು ಕರೆತಂದು ಎರಡು ತಿಂಗಳ ಕಾಲ ನಿರಂತರ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ.ಅಲ್ಲದೇ ಅಗತ್ಯವಿರುವವರಿಗೆ ವಾಕರ್, ವೀಲ್ ಚೇರ್ ಹಾಗೂ ಹೈಡ್ರೋಲಿಕ್ ಹಾಸಿಗೆಗಳನ್ನು ಒದಗಿಸಲಾಗುತ್ತದೆ. ಕಿವುಡ ಮತ್ತು ಮೂಕ ಮಕ್ಕಳಿಗೆ ತಜ್ಞರಿಂದ ವಿಶೇಷ ತರಬೇತಿ ನೀಡಲಾಗುತ್ತದೆ. ಜೊತೆಗೆ ಬಾಧಿತರ ಕುಟುಂಬದ ಆರ್ಥಿಕ ಸ್ವಾವಲಂಬನೆಗಾಗಿ ಪೇಪರ್ ಬ್ಯಾಗ್ ತಯಾರಿಕೆ, ಹೊಲಿಗೆ, ಗೃಹ ಉತ್ಪನ್ನಗಳ ತಯಾರಿಕೆಯಂತಹ ಕೌಶಲ ತರಬೇತಿ ನೀಡಲಾಗುತ್ತದೆ.
ಸದ್ಯ ಭಟ್ಕಳ ತಾಲೂಕಿನಿಂದ ಈ ಯೋಜನೆ ಆರಂಭಿಸಲಾಗುತ್ತಿದ್ದು, ಹಂತಹಂತವಾಗಿ ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಅಥವಾ ಪಂಚಾಯತ್ ಕಟ್ಟಡಗಳಲ್ಲಿ ಈ ತರಬೇತಿ ಶಿಬಿರ ನಡೆಯಲಿವೆ ಎಂದು ತಿಳಿಸಿದರು.ಈ ಸಂದರ್ಭ ಸಂಸ್ಥೆಯ ಯೋಜನಾಧಿಕಾರಿ ನಾರಾಯಣ ಹೆಗಡೆ ಇದ್ದರು.