2014ರಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು ಅಡಕೆ ಹಾನಿಕಾರಕ ಅಲ್ಲ ಎಂಬ ವರದಿ!

KannadaprabhaNewsNetwork |  
Published : Nov 20, 2024, 12:31 AM IST
ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ಅಡಕೆ ಹಾನಿ ಕಾರಕ ಅಲ್ಲ ಎಂಬ ಅಧ್ಯಯನ ವರದಿ | Kannada Prabha

ಸಾರಾಂಶ

ಗೂಗಲ್‌ ಸ್ಕಾಲರ್ ಆಗಿರುವ ಡಾ.ವಿಘ್ನೇಶ್ವರ ವರ್ಮುಡಿ ಅವರ ಅಡಕೆ ಕುರಿತ ಅಧ್ಯಯನಗಳು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ಆದರೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬುದನ್ನು ಮತ್ತಷ್ಟು ದೃಢೀಕರಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಲು ಇನ್ನಷ್ಟು ಅಧ್ಯಯನ ವರದಿಗಳ ಅವಶ್ಯಕತೆಯನ್ನು ಅಡಕೆ ಬೆಳೆಗಾರರ ಸಂಘಟನೆಗಳು ಹೇಳುತ್ತಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎನ್ನುವ ಬಗ್ಗೆ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೃಷಿ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ನೇತೃತ್ವದಲ್ಲಿ ಅಧ್ಯಯನ ವರದಿಯೊಂದು ಸರ್ಕಾರಕ್ಕೆ 2014ರಲ್ಲಿ ಸಲ್ಲಿಕೆಯಾಗಿತ್ತು. ಆ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆಯೇ ಅಥವಾ ಅದರ ಅಂಶಗಳನ್ನು ಕೇಂದ್ರ ಸರ್ಕಾರ ಗಮನಿಸಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

2013ರಲ್ಲಿ ಸುಪ್ರೀಂ ಕೋರ್ಟ್‌ ಅಡಕೆ ಹಾನಿಕಾರಕ ಎಂಬ ತೀರ್ಪು ನೀಡಿದ ಬೆನ್ನಿಗೆ ರಾಜ್ಯ ಸರ್ಕಾರ ಬೆಳೆಗಾರರ, ಪ್ರತಿನಿಧಿಗಳ ಸಭೆ ಕರೆದು ಅಡಕೆಯಲ್ಲಿನ ಹಾನಿಕಾರಕ ಅಂಶಗಳ ಬಗ್ಗೆ ವರದಿ ಸಲ್ಲಿಕೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಡಾ.ವಿಘ್ನೇಶ್ವರ ವರ್ಮುಡಿ ಸೇರಿದಂತೆ ತೋಟಗಾರಿಕಾ ಇಲಾಖೆಯ ಪ್ರಮುಖರು, ಅಡಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಸೇರಿದಂತೆ ಇತರೆ ಸಹಕಾರಿ ಸಂಘಗಳ ಪ್ರಮುಖರು, ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಅಡಕೆ ಹಾನಿಕಾರಕ ಅಲ್ಲ, ಆರೋಗ್ಯದಾಯಕ ಎಂಬ ಬಗ್ಗೆ ಹಲವು ಸಂಶೋಧನೆ, ಅಂಶಗಳನ್ನು ಉಲ್ಲೇಖಿಸಿ ಸಮಗ್ರ ವರದಿ ಸಲ್ಲಿಸಿದ್ದರು. ಸುಮಾರು 130 ಪುಟಗಳ ಈ ವರದಿಯನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗೆ ಸಲ್ಲಿಸಲಾಗಿತ್ತು. ವರದಿಯ ಉಲ್ಲೇಖ: ತಮಿಳುನಾಡಿನ ಮೆಡಿಕಲ್‌ ಕಾಲೇಜು ಇತ್ತೀಚೆಗೆ ನಡೆಸಿದ ಅಧ್ಯಯನ ಪ್ರಕಾರ ವೀಳ್ಯದೆಲೆ ಮತ್ತು ಅಡಕೆಯಲ್ಲಿ ಕ್ಯಾನ್ಸರ್‌ ನಿರೋಧಕ ಗುಣಗಳಿವೆ ಎಂಬುದು ಪತ್ತೆಯಾಗಿತ್ತು.

ಚೆನ್ನೈನ ಮೆಡಿಕಲ್‌ ಕಾಲೇಜ್‌ ಹಾಸ್ಪಿಟಲ್‌ ಅಂಡ್‌ ರಿಸರ್ಚ್‌ ಸೆಂಟರ್‌ನ ಮೈಕ್ರೋಬಯಾಲಜಿ ವಿಭಾಗದ ಡಾ.ಪ್ರಭು ಎನ್‌. ಎಂಬವರು ನಡೆಸಿದ ‘ಆ್ಯಂಟಿ ಮೈಕ್ರೋಬಯಾಲಜಿ ಎಫೆಕ್ಟ್ ಆಫ್‌ ಚ್ಯೂಯಿಂಗ್‌ ತಾಂಬೂಲಂ ಬೈ ಟೆಸ್ಟಿಂಗ್‌ ಸಲೈವ ಆಫ್‌ ವಾಲೆಂಟಿಯರೆಸ್‌’ ಎಂಬ ಅಧ್ಯಯನದ ವಿಚಾರ ಇಂಡಿಯನ್‌ ಜರ್ನಲ್‌ ಆಫ್‌ ಎಪ್ಲೈಡ್‌ ರಿಸರ್ಚ್‌ 2013ರ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ವೀಳ್ಯದೆಲೆ, ಅಡಕೆ, ಸುಣ್ಣ, ಲವಂಗ, ಏಲಕ್ಕಿ ಮಿಶ್ರಣದ ತಾಂಬೂಲವನ್ನು ಜೀರ್ಣಕ್ರಿಯೆ ಸರಿಯಾಗಲು ಜನತೆ ಅನಾದಿ ಕಾಲದಿಂದಲೂ ಉಪಯೋಗಿಸುತ್ತಿದ್ದಾರೆ. ಅದರಲ್ಲಿ ಅನೇಕ ಔಷಧ ಗುಣಗಳಿವೆ. ಇದರ ಸತ್ಯಾಸತ್ಯತೆ ಅರಿಯಲು ಪ್ರಭು ಅವರು ಗರ್ಭಿಣಿ ಮತ್ತು ಗರ್ಭಿಣಿಯೇತರರಿಗೆ ತಾಂಬೂಲ ತಿನ್ನಿಸಿ ಅಧ್ಯಯನ ನಡೆಸಿದ್ದರು. ತಾಂಬೂಲವನ್ನು ಪ್ರತ್ಯೇಕವಾಗಿ ತಿನ್ನಿಸಿದಾಗ ಬರುವ ಜೊಲ್ಲು ರಸವನ್ನು ಸಂಗ್ರಹಿಸಿ ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಿದ್ದರು. ತಾಂಬೂಲ ಯಾ ಬೀಡಾ ಅಥವಾ ಪಾನ್‌ ಸೇವನೆಯಿಂದ ವಿವಿಧ ರೀತಿಯ ರೋಗಗಳನ್ನು ನಿವಾರಿಸಲು ಸಾಧ್ಯ ಎಂದು ಕಂಡುಕೊಂಡಿದ್ದರು. ಈ ಅಧ್ಯಯನ ವರದಿಯ ಪ್ರಮುಖ ಅಂಶವನ್ನು ಡಾ.ವಿಘ್ನೇಶ್ವರ ವರ್ಮುಡಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ ಇತರೆ ಅಧ್ಯಯನ ವರದಿಗಳನ್ನೂ ವರದಿಯಲ್ಲಿ ಅಡಕಗೊಳಿಸಿದ್ದರು.

ಅದಕ್ಕೂ ಮೊದಲು 2010ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆ ಎಫ್‌ಎಒ(ಫುಡ್‌ ಅಗ್ರಿಕಲ್ಚರಲ್‌ ಆರ್ಗನೈಸೇಷನ್‌)ಗೂ ಅಡಕೆ ಕುರಿತಂತೆ ಸಮಗ್ರ ವರದಿ ಸಲ್ಲಿಸಿದ್ದರು. ಗೂಗಲ್‌ ಸ್ಕಾಲರ್ ಆಗಿರುವ ಡಾ.ವಿಘ್ನೇಶ್ವರ ವರ್ಮುಡಿ ಅವರ ಅಡಕೆ ಕುರಿತ ಅಧ್ಯಯನಗಳು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ಆದರೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬುದನ್ನು ಮತ್ತಷ್ಟು ದೃಢೀಕರಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಲು ಇನ್ನಷ್ಟು ಅಧ್ಯಯನ ವರದಿಗಳ ಅವಶ್ಯಕತೆಯನ್ನು ಅಡಕೆ ಬೆಳೆಗಾರರ ಸಂಘಟನೆಗಳು ಹೇಳುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ