ರಾಣಿಬೆನ್ನೂರು: ಯುಯುಸಿಎಂಎಸ್ ತಂತ್ರಾಂಶದಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ ಮಾತನಾಡಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಯುಯುಸಿಎಮ್‌ಎಸ್ (Unified University College Management system) ತಂತ್ರಾಂಶ ಬಹಳ ದೋಷದಿಂದ ಕೂಡಿದ್ದು, ಇದರಿಂದ ವಿದ್ಯಾರ್ಥಿಗಳು ಪರದಾಡುವಂತ ಸ್ಥಿತಿಗೆ ನಿರ್ಮಾಣವಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಹಾವೇರಿ. ಗದಗ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳು ಜನವರಿಯಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪರೀಕ್ಷಾ ಅರ್ಜಿ ತುಂಬುತ್ತಿದ್ದು, ವಿದ್ಯಾರ್ಥಿಗಳ ಖಾತೆಯಿಂದ ಹಣ ಪಾವತಿಯಾಗುತ್ತಿದೆ. ಆದರೆ ಅರ್ಜಿ ಸಲ್ಲಿಕೆಯಾಗದೆ ವಿದ್ಯಾರ್ಥಿಗಳು ಚಿಂತೆಗೀಡಾಗುತ್ತಿದ್ದಾರೆ. ನಿಮ್ಮ ಅರ್ಜಿ ತಿರಸ್ಕೃತ ಎಂಬ ಸಂದೇಶದಿಂದ ವಿದ್ಯಾರ್ಥಿಗಳು ಭಯಭೀತರಾಗುತ್ತಿದ್ದಾರೆ. ಇದಲ್ಲದೆ ಹಣದಲ್ಲೂ ವ್ಯತ್ಯಾಸವಾಗುತ್ತಿದೆ. ಒಬ್ಬ ವಿದ್ಯಾರ್ಥಿಗೆ ತೋರಿಸಿದ ಹಣ ಇನ್ನೊಬ್ಬ ವಿದ್ಯಾರ್ಥಿಗೆ ತೋರಿಸುವುದಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ತಾಂತ್ರಿಕ ದೋಷದಿಂದ ವೆಬ್‌ಸೈಟ್ ಓಪನ್ ಆಗುತ್ತಿಲ್ಲ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕೇಳಿದರೆ ವಿಶ್ವವಿದ್ಯಾಲಯ ಕೇಳಿ ಎಂದು ಹೇಳುತ್ತಾರೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕೇಳಿದರೆ ವಿಶ್ವವಿದ್ಯಾಲಯದಲ್ಲಿ ಶುಲ್ಕ ಮತ್ತೊಮ್ಮೆ ಪಾವತಿಸಿ. ಇಲ್ಲವೇ ಯುಯುಸಿಎಂಎಸ್‌ನ ಬಳಿ ಹೋಗಿ ಎಂದು ಹೇಳುತ್ತಿದ್ದಾರೆ. ಈ ಎಲ್ಲ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಆದ್ದರಿಂದ ಈ ಪರೀಕ್ಷಾ ಶುಲ್ಕ ಸೇರಿದಂತೆ ಇತರೆ ಶುಲ್ಕಗಳನ್ನು ಮತ್ತು ತಮ್ಮ ಕಾಲೇಜು ಹಂತದಲ್ಲಿ ಆನ್‌ಲೈನ್ ವ್ಯವಸ್ಥೆ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.ಜಿಲ್ಲಾ ಎಸ್‌ಎಫ್‌ಡಿ ಪ್ರಮುಖ ಅಭಿಲಾಷ ಬಾದಾಮಿ, ತಾಲೂಕು ಸಂಚಾಲಕ ವಿನಾಯಕ ತಾವರಗೊಂದಿ, ನಗರ ಸಹ ಕಾರ್ಯದರ್ಶಿ ಯಲ್ಲಮ್ಮ, ವಿದ್ಯಾರ್ಥಿನಿ ಪ್ರಮುಖ ಸವಿತಾ, ವೈಷ್ಣವಿ, ಬಸವರಾಜ, ಆಯುಷಾ, ಭಾರತಿ, ಶ್ವೇತಾ, ಗಗನದೀಪ, ನಾಗರಾಜ, ಭರತಕುಮಾರ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.