ಶಿರಸಿ ನಗರಸಭೆ ಬಜೆಟ್‌ನಲ್ಲಿ ಸಾರ್ವಜನಿಕರ ಸಲಹೆ ಅಳವಡಿಸಲು ಮನವಿ

KannadaprabhaNewsNetwork |  
Published : Feb 01, 2025, 12:02 AM IST
ಪೊಟೋ೩೧ಎಸ್.ಆರ್.ಎಸ್೪ (ನಗರಸಭೆಯ ಅಟಲ್‌ಜೀ ಸಭಾಭವನದಲ್ಲಿ ಬಜೆಟ್ ಪೂರ್ವ ತಯಾರಿ ಸಭೆಯಲ್ಲಿ ಶರ್ಮಿಳಾ ಮಾದನಗೇರಿ ಮಾಹಿತಿ ನೀಡಿದರು.) | Kannada Prabha

ಸಾರಾಂಶ

ನಗರದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ತಗ್ಗು ಪ್ರದೇಶಗಳ ಸುರಕ್ಷತೆ ನಗರಸಭೆ ಗಮನ ಹರಿಸುತ್ತಿಲ್ಲ. ಸಾರ್ವಜನಿಕರಿಂದ ಆಸ್ತಿ ತೆರಿಗೆಯನ್ನು ನಗರಸಭೆ ಕರಾರುವಕ್ಕಾಗಿ ಸಂಗ್ರಹಿಸುತ್ತದೆಯಾದರೂ ನೀರಿನ ತೆರಿಗೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಶಿರಸಿ: ಇಲ್ಲಿನ ನಗರಸಭೆ ಪ್ರಸಕ್ತ ಸಾಲಿನಲ್ಲಿ ₹೧೪.೮೩ ಕೋಟಿ ಬಜೆಟ್ ಮಂಡಿಸಲು ತೀರ್ಮಾನಿಸಿದೆ ಎಂದು ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ತಿಳಿಸಿದರು.ಶುಕ್ರವಾರ ನಗರಸಭೆಯ ಅಟಲ್‌ಜೀ ಸಭಾಭವನದಲ್ಲಿ ಬಜೆಟ್ ತಯಾರಿ ಸಭೆಯಲ್ಲಿ ಮಾಹಿತಿ ನೀಡಿ, ಕಟ್ಟಡ, ಭೂ ತೆರಿಗೆ, ಅನಧಿಕೃತ ಆಸ್ತಿ ತೆರಿಗೆಯಿಂದ ₹೪.೮೧ ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದೇವೆ. ನೀರಿನ ತೆರಿಗೆ ₹೨.೪೬ ಕೋಟಿ, ಅಂಗಡಿ ಬಾಡಿಗೆಯಿಂದ ₹೧.೩೫ ಕೋಟಿ ಪ್ರಮುಖ ಆದಾಯ ನಿರೀಕ್ಷಿಸಿದ್ದೇವೆ. ೧೫ನೇ ಹಣಕಾಸು ಯೋಜನೆಯಿಂದ ₹೨.೪೬ ಕೋಟಿ, ಎಸ್‌ಎಫ್‌ಸಿ ವೇತನ ಅನುದಾನದಿಂದ ₹೪.೩೧ ಕೋಟಿ, ವಿದ್ಯುತ್ ಅನುದಾನ ₹೬.೭ ಕೋಟಿ ಸೇರಿದಂತೆ ವಿವಿಧ ಅನುದಾನಗಳಿಂದ ₹೧೩.೬೦ ಕೋಟಿ ಸರ್ಕಾರದಿಂದ ಬಂದಿದೆ ಎಂದರು.ಸಾರ್ವಜನಿಕರ ಪರವಾಗಿ ಸಭೆಯಲ್ಲಿ ಚರ್ಚೆ ನಡೆಸಿದ ಜಿ.ಜಿ. ಹೆಗಡೆ ಕಡೆಕೋಡಿ, ಶಿರಸಿಯನ್ನು ಸುಂದರ ನಗರ ಮಾಡುವ ಯತ್ನ ನಡೆಸಬೇಕು. ೨೦೧೦ರಿಂದ ಇಂದಿನವರೆಗೂ ಬಜೆಟ್ ಹಿಂದಿನ ಬಜೆಟ್‌ನ ನಕಲಿನಂತಾಗುತ್ತಿದೆ. ನಗರ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಪಡೆದರೂ ಅದನ್ನು ಅಳವಡಿಸಿಕೊಳ್ಳುತ್ತಿಲ್ಲ.

ನಗರದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ತಗ್ಗು ಪ್ರದೇಶಗಳ ಸುರಕ್ಷತೆ ನಗರಸಭೆ ಗಮನ ಹರಿಸುತ್ತಿಲ್ಲ. ಸಾರ್ವಜನಿಕರಿಂದ ಆಸ್ತಿ ತೆರಿಗೆಯನ್ನು ನಗರಸಭೆ ಕರಾರುವಕ್ಕಾಗಿ ಸಂಗ್ರಹಿಸುತ್ತದೆಯಾದರೂ ನೀರಿನ ತೆರಿಗೆ ಬಗ್ಗೆ ಗಮನ ಹರಿಸುತ್ತಿಲ್ಲ. ೨೦೧೪- ೧೫ರಿಂದಲೂ ಸರ್ಕಾರದಿಂದ ಬರುವ ಆದಾಯದ ಮೇಲೆ ಅವಲಂಬನೆ ಜಾಸ್ತಿ ಆಗುತ್ತಿದ್ದರೆ, ಸ್ವಂತ ಆದಾಯ ಕಡಿಮೆ ಆಗುತ್ತಿದೆ. ಕೆಲ ವಿಧದ ತೆರಿಗೆಗಳ ಸಂಗ್ರಹಣೆ ನಿರ್ಲಕ್ಷ್ಯ ಒಂದು ಹಂತಕ್ಕೆ ಇದು ಕರ್ತವ್ಯಲೋಪವಾದಂತೆ ಆಗುತ್ತಿದೆ ಎಂದರು. ನಗರದಲ್ಲಿ ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಅವು ಪ್ಲಾನ್ ಪ್ರಕಾರ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ನಗರಸಭೆ ಅಧಿಕಾರಿಗಳು ಗಮನಿಸುತ್ತಿಲ್ಲ. ನಗರದೊಳಗಿನ ರಸ್ತೆಗಳ ಸ್ಥಿತಿ, ನಿರ್ವಹಣೆ ಕುರಿತು ನಗರಸಭೆ ರಜಿಸ್ಟರ್ ನಿರ್ವಹಣೆ ಮಾಡುತ್ತಿಲ್ಲ. ನಗರದಲ್ಲಿ ರಸ್ತೆ ನಿರ್ಮಾಣವಾದರೆ ಒಂದು ವರ್ಷಕ್ಕೇ ಹಾಳಾಗುತ್ತಿದೆ. ನಗರಸಭೆಯ ಉಳಿತಾಯವೂ ವರ್ಷದಿಂದ ವರ್ಷಕ್ಕೆ ಏರಿಕೆ ಆಗಬೇಕಿದೆ. ಸಿಸಿ ಕ್ಯಾಮೆರಾ ಅಳವಡಿಸುವ ಸಲುವಾಗಿ ನಗರಸಭೆ ೨೦೨೩- ೨೪ರಲ್ಲಿ ಹಣ ಮೀಸಲಿಟ್ಟಿಲ್ಲ. ಹೊಸ ಮತ್ತು ಆಧುನಿಕ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಗೂ ನಗರಸಭೆ ಗಮನ ಹರಿಸಬೇಕು.

ನಗರದ ತ್ಯಾಜ್ಯ ನೀರನ್ನು ಹೊತ್ತೊಯ್ಯುವ ರಾಜಕಾಲುವೆ ಸಮರ್ಪಕವಾಗಿರದೇ ಬಾವಿ ನೀರಿನ ಸ್ಥಿತಿ ಹಾಳಾಗುತ್ತದೆ. ನಗರದಲ್ಲಿ ಕಸದ ಗಾಡಿಗಳು ಮುಚ್ಚಿಗೆ ಇಲ್ಲದೇ ಸಾಗುತ್ತಿದ್ದು, ರಸ್ತೆ ಮೇಲೆ ಕಸ ಬೀಳುತ್ತಿದೆ. ನಗರಗಳ ಉದ್ಯಾನಗಳ ನಿರ್ವಹಣೆ ಸರಿ ಆಗುತ್ತಿಲ್ಲ. ನಿರ್ವಹಣೆಗೆ ಮೀಸಲಿಟ್ಟ ಹಣ ಎಲ್ಲಿ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಮತ್ತಿತರರು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ