ಡೆತ್‌ನೋಟ್‌ ಬರೆದಿಟ್ಟು ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ

KannadaprabhaNewsNetwork |  
Published : Jul 12, 2024, 01:30 AM IST
೧೧ಎಚ್‌ವಿಆರ್೪-ಅರ್ಚನಾ | Kannada Prabha

ಸಾರಾಂಶ

ಹಿರೇಕೆರೂರು ತಾಲೂಕಿನ ದೂದೀಹಳ್ಳಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಹಿರೇಕೆರೂರು:ತಾಲೂಕಿನ ದೂದೀಹಳ್ಳಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಹಿರೇಕೆರೂರ ತಾಲೂಕಿನ ಆಲದಕಟ್ಟಿ ಗ್ರಾಮದ ಅರ್ಚನಾ ಬಸನಗೌಡ ಗೌಡಣ್ಣನವರ (೧೫) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ. ಇವಳು ದೂದೀಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಳು. ಅರ್ಚನಾ ಅನಾರೋಗ್ಯದ ನೆಪವೊಡ್ಡಿ, ಜೂ.೨೯ರಂದು ತಮ್ಮ ಪಾಲಕರನ್ನು ಕರೆಸಿಕೊಂಡು ಊರಿಗೆ ಹೋಗಿದ್ದಾಳೆ. ಜು.೨ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ, ಈ ಬಗ್ಗೆ ದೂರು ದಾಖಲಿಸದೇ ಅಂದೇ ಕುಟುಂಬದವರು, ಶಿಕ್ಷಕರು ಅಂತ್ಯಸಂಸ್ಕಾರ ನೆರವೇರಿಸಿದ್ದು, ಡೆತ್‌ನೋಟ್ ಸಿಕ್ಕ ಬಳಿಕ ಶಾಲೆಯ ಹಿಂದಿ ಶಿಕ್ಷಕನ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.ಅರ್ಚನಾ ಡೆತ್‌ನೋಟಿನಲ್ಲಿ ಕುಟುಂಬದ ವಿಷಯವನ್ನು ಬರೆದಿಟ್ಟು ಕೊನೆಗೆ `ರೆಯಾ ಮತ್ತು ಆಕೆಯ ತಾಯಿಗೆ, ನೀವು ಮಾಡಿದ ತಪ್ಪಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ನಮೂದಿಸಿದ್ದಾಳೆ. ರೆಯಾ ಶಾಲೆಯ ಹಿಂದಿ ಶಿಕ್ಷಕನ ಮಗಳು. ರೆಯಾ ಹಾಗೂ ಅರ್ಚನಾ ಇಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಅರ್ಚನಾಗೆ ಶಾಲೆಯ ವಸತಿಗೃಹದಲ್ಲಿ ವಾಸವಾಗಿದ್ದ ರೆಯಾ ಹಾಗೂ ಆಕೆಯ ತಾಯಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇದು ಡೆತ್ ನೋಟ್‌ನಿಂದ ಬಹಿರಂಗಗೊಂಡಿದೆ. ಡೆತ್‌ನೋಟ್ ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮದ ಕೆಲ ಮುಖಂಡರು ರಾಜಿ ಪಂಚಾಯಿತಿ ಮಾಡಿಸಲು ಪಾಲಕರನ್ನು ದೂದೀಹಳ್ಳಿ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಾಂಶುಪಾಲ ಈರಾನಾಯ್ಕ ಎದುರು ಸಭೆ ನಡೆಸಿ ರು.೧೦ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಿಕ್ಷಕರೆಲ್ಲಾ ಸೇರಿ ೧ ಲಕ್ಷ ರು. ಕೊಟ್ಟು ಸುಮ್ಮನಾಗಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರಿಗೆ ವಿಷಯ ತಿಳಿಸದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ ತಪ್ಪಿತಸ್ಥರೆಲ್ಲ ಮೇಲೂ ಕ್ರಮ ಜರುಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.ಡೆತ್‌ನೋಟ್‌ನಲ್ಲಿ ಏನಿದೆ: ಕುಟುಂಬದವರ ಕ್ಷಮೆ ಯಾಚಿಸಿ ಕೊನೆ ಸಾಲುಗಳಲ್ಲಿ, ರೆಯಾ ನಾ ನಿನ್ನ ಬಿಡಲ್ಲ. ನೀನು ನಿಮ್ಮ ಮಮ್ಮಿ ಕೊಟ್ಟ ಕಷ್ಟಕ್ಕೆ ಬೆಲೆ ತೆರುತ್ತೀರಿ..'''''''' ಎಂದು ನೋವಿನಿಂದ ಬರೆದಿದ್ದಾಳೆ. ಈ ಕುರಿತು ಮೃತಬಾಲಕಿಯ ತಂದೆ ಬಸನಗೌಡ ಗೌಡಣ್ಣನವರ ಜು. ೧೧ರ ಗುರುವಾರ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ನನ್ನ ಮಗಳ ಸಾವಿನ ಬಗ್ಗೆ ಸಂಶಯವಿದ್ದು, ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು