ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದಾಖಲೆಗಳ ಮಹತ್ವ, ಸಂರಕ್ಷಣೆ, ನಿರ್ವಹಣೆ ಹಾಗೂ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013 ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಸಾರ್ವಜನಿಕರು ಭೂ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವದು ತಪ್ಪಿ, ಬೆರಳ ತುದಿಯಲ್ಲಿ ದಾಖಲೆಗಳು ಸಿಗಲಿದೆ ಎಂದರು.
ಭೂಸುರಕ್ಷಾ ಯೋಜನೆಯಡಿ ಪ್ರತಿ ದಾಖಲೆ ಮತ್ತು ಪುಟಗಳನ್ನು ಯಥಾವತ್ತಾಗಿ ಸ್ಕ್ಯಾನ್ ಮಾಡುವುದರ ಜೊತೆಗೆ, ಅದರ ನೈಜತೆಯನ್ನು ಕಚೇರಿ ಮುಖ್ಯಸ್ಥರ ಮುಖಾಂತರ ದೃಢೀಕರಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ಇದರ ಸೌಲಭ್ಯ ಸಿಗುತ್ತಿದ್ದು, ದಾಖಲೆಗಳಿಗಾಗಿ ಯಾರೂ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. 2000ನೇ ಇಸವಿಯಲ್ಲಿ ಜಾರಿಗೆ ಬಂದ ಭೂಮಿ ತಂತ್ರಜ್ಞಾನದಂತೆ, ಈಗ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲೇ ಪಹಣಿ, ಮ್ಯುಟೇಷನ್‌ಗಳನ್ನು ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದ್ದರಿಂದ ಇಲಾಖೆಯ ಸಿಬ್ಬಂದಿ ದಾಖಲೆಗಳ ಮಹತ್ವವನ್ನು ಅರಿತು ಕೆಲಸ ಮಾಡಬೇಕು ಎಂದರು.ಸಾರ್ವಜನಿಕ ಕಚೇರಿಗಳಲ್ಲಿ ಕಡತಗಳ ನಿರ್ವಹಣೆ ಮತ್ತು ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ. ಎಷ್ಟೋ ಬಾರಿ ಕಡತಗಳ ನಿರ್ವಹಣೆಯನ್ನು ಸರಿಯಾಗಿ ಮಾಡದ ಕಾರಣ, ಮಾಹಿತಿ ಆಯೋಗದ ಮುಂದೆ ಅಧಿಕಾರಿಗಳು ಛೀಮಾರಿ, ಆಕ್ಷೇಪಣೆ ಎದುರಿಸುವುದು, ದಂಡ ಕಟ್ಟುವುದು ಹಾಗೂ ನ್ಯಾಯಾಲಯಗಳಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ಪ್ರಸಂಗಗಳು ಎದುರಾಗುತ್ತಿವೆ. ಸಾರ್ವಜನಿಕ ದಾಖಲೆಗಳ ಕಾಯ್ದೆಯ ಮಹತ್ವದ ಬಗ್ಗೆ ಅನೇಕರಿಗೆ ಇನ್ನು ಸರಿಯಾದ ಅರಿವಿಲ್ಲ. ವರ್ಗಾವಣೆಯಾದ ತಕ್ಷಣ ಕೆಲವರು ದಾಖಲೆಗಳನ್ನು ನೀಡುತ್ತಾರೆ, ಇನ್ನು ಕೆಲವರು ನೀಡುವುದಿಲ್ಲ. ಚಾರ್ಜ್ ತೆಗೆದುಕೊಳ್ಳುವವರೂ ಸಹ ಏನು ಕೊಡುತ್ತಿದ್ದಾರೋ ಅದನ್ನು ಸರಿಯಾಗಿ ಕೇಳಿ ಪಡೆದುಕೊಳ್ಳುವುದಿಲ್ಲ. ಕಚೇರಿಯ ರೆಕಾರ್ಡ್ ವಿಚಾರದಲ್ಲಿ ಕೇವಲ ಕೆಳಹಂತದ ನೌಕರರು ಮಾತ್ರವಲ್ಲದೆ, ಕಚೇರಿ ಮುಖ್ಯಸ್ಥರು, ಮ್ಯಾನೇಜರ್, ಶಿರಸ್ತೆದಾರರು ಸೇರಿದಂತೆ ಎಲ್ಲರಿಗೂ ಜವಾಬ್ದಾರಿ ಇರಬೇಕು. ಆದರೆ ಇಂದು ಅಧಿಕಾರಿಗಳು ನನ್ನ ಟೇಬಲ್ ಮೇಲೆ ಬರುವ ಫೈಲ್‌ಗೆ ಮಾತ್ರ ನಾನು ಸಹಿ ಮಾಡುವುದು ಎಂಬ ಮಟ್ಟಕ್ಕೆ ತಲುಪಿರುವುದು ವಿಷಾದನೀಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013ರ ಪರಿಚಯ ಮತ್ತು ದಾಖಲೆಗಳ ನಿರ್ವಹಣೆ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ಜಂಟಿ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದಪ್ಪ, ಸೂಕ್ಷ್ಮ ಚಿತ್ರೀಕರಣ ವಿಧಾನದಲ್ಲಿ ದಾಖಲೆಗಳ ಸಂರಕ್ಷಣೆ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ತಾಂತ್ರಿಕ ಅಧಿಕಾರಿ ಕೆ.ನಾರಾಯಣ ಬಾಬು ಉಪನ್ಯಾಸ ನೀಡಿದರು.