ಕನ್ನಡಪ್ರಭ ವಾರ್ತೆ ಕಮತಗಿ
ವಿದ್ಯಾರ್ಥಿಗಳು ಇಂತಹ ದೇಶಿಯ ಕ್ರೀಡೆಗಳನ್ನು ಉಳಿಸಿ, ಬೆಳೆಸಬೇಕು ಎಂದು ಕಮತಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ಬಸವರಾಜ ಪಿ.ಕುಂಬಳಾವತಿ ಹೇಳಿದರು.ಪಟ್ಟಣದಲ್ಲಿನ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ & ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಸಹಯೋಗದಲ್ಲಿ 2ನೇ ದಿನವಾದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಏಕವಲಯ ಅಂತರ ಕಾಲೇಜುಗಳ ಬಾಲಕರ ಹಾಗೂ ಬಾಲಕಿಯರ ಚದುರಂಗ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಚದುರಂಗ ಆಟವು ಮೊದಲು ಪ್ರಾಚಿನ ಭಾರತದಲ್ಲಿ ಹುಟ್ಟಿಕೊಂಡು ನಂತರ ಹೊರದೇಶಗಳಲ್ಲಿ ಹರಡಿ ಅಲ್ಲಿನ ನಿಯಮಗಳು ಮತ್ತು ಹೊಸ ತಂತ್ರಗಳೊಂದಿಗೆ ಇಂದಿನ ಆಧುನಿಕತೆಗೆ ಚೆಸ್ ಆಗಿ ರೂಪಗೊಂಡಿದ್ದು, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವನೆ ಹೊಂದಿರಬೇಕು ಎಂದು ತಿಳಿಸಿದರು.ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹುಚ್ಚೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಚದುರಂಗ ಆಟವು ಬದುಕಿನ ಆಟವನ್ನು ತೋರಿಸುವ ಹಾಗೆ ಇದ್ದು, ಚದುರಂಗವು ಜೀವನದ ಸವಾಲು, ತಂತ್ರ ಮತ್ತು ಸಮತೋಲನದ ಆಟವನ್ನು ಪ್ರತಿನಿಧಿಸುವ ಹಾಗೆ ರಾಜನ ಸುರಕ್ಷತೆಗಾಗಿ ಪದಾತಿಗಳು, ಒಂಟೆ, ಕುದುರೆ ಮತ್ತು ರಾಣಿಯಂತಹ ಎಲ್ಲ ಪಾತ್ರಗಳ ಸಮನ್ವಯದಂತೆ ಎಲ್ಲರ ಜೀವನದಲ್ಲಿ ಯಶಸ್ವಿಯಾಗಲು ನೈತಿಕತೆ, ಧೈರ್ಯ, ಬುದ್ಧಿವಂತಿಕೆಯನ್ನು ಸಮತೋಲನಗೊಳಿಸುವುದು ಅವಶ್ಯಕವಾಗಿದೆ ಎಂದರು.ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ವಿದ್ಯಾಧರ ಆರ್.ಮಳ್ಳಿ ಅದ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಅನಿಲಕುಮಾರ ಕಲ್ಯಾಣಶೆಟ್ಟಿ, ದೈಹಿಕ ನಿರ್ದೇಕರಾದ ಎ.ಎಚ್.ನದಾಫ್, ನೀಲಪ್ಪ ಕುರಿ, ಬಿ.ಎಸ್.ಲೋಕಾಪೂರ, ಸುನೀಲ ನಾರಾಯಣಿ, ಪ್ರಸನ್ನ ಕನ್ನಿವೀರಮಠ, ಪಿಕೆಪಿಎಸ್ ಸದಸ್ಯ ಮುತ್ತುರಾಜ ಬೆಲ್ಲದ, ಕಾಲೇಜಿನ ಪ್ರಾಚಾರ್ಯ ಪಿ.ಎಂ.ಗುರುವಿನಮಠ, ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷ ಡಿ.ಆರ್.ಕುಬಸದ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬಾಲಕರ ಹಾಗೂ ಬಾಲಕಿಯರ ಚದುರಂಗ ಪಂದ್ಯಾವಳಿಯಲ್ಲಿ ವಿಜೇತ ತಂಡ
ಚದುರಂಗ ಪಂದ್ಯಾವಳಿಯಲ್ಲಿ ಬಾಗಲಕೋಟೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಲಕರ ಹಾಗೂ ಬಾಲಕಿಯರ ಪಂದ್ಯಾವಳಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿತು.ವಿಜೇತ ತಂಡಗಳು:ಬಾಲಕರ ಚದುರಂಗ ಪಂದ್ಯಾವಳಿಯಲ್ಲಿ ಬಾಗಲಕೋಟೆ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪ್ರಥಮ), ಮುಧೋಳ ಎಸ್.ಆರ್.ಕಂಠಿ ಕಾಲೇಜು (ದ್ವಿತೀಯ), ಗುಳೇದಗುಡ್ಡ ಭಂಡಾರಿ ಕಾಲೇಜು (ತೃತೀಯ) ಸ್ಥಾನ ಪಡೆದುಕೊಂಡಿತು. ಬಾಲಕಿಯರ ಚದುರಂಗ ಪಂದ್ಯಾವಳಿಯಲ್ಲಿ ಮುಧೋಳ ಎಸ್.ಆರ್.ಕಂಠಿ ಕಾಲೇಜು (ಪ್ರಥಮ), ಬಾಗಲಕೋಟೆ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವಿತೀಯ), ಹುನಗುಂದ ಸರಕಾರಿ ಪ್ರಥಮ ದರ್ಜೆ ಕಾಲೇಜು (ತೃತೀಯ) ಸ್ಥಾನ ಪಡೆದುಕೊಂಡು ಆಯ್ಕೆಯಾಗಿದ್ದಾರೆ.