ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ನೇಜಾರು ಗ್ರಾಮದಲ್ಲಿ ತಾಯಿ ಮತ್ತು ಅವರ ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ.ಹಸೀನಾ (48) ಮತ್ತು ಅವರ ಮಕ್ಕಳಾದ ಅಫ್ನಾನ್ (23), ಆಯ್ನಾಝ್ (21) ಮತ್ತು ಅಸೀಮ್ (13) ಕೊಲೆಯಾದವರು. ಹಸೀನಾ ಅವರ ಪತಿ ನೂರ್ ಮಹಮ್ಮದ್ ಸೌದಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದೆ. ಆಟೋ ರಿಕ್ಷಾದಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಈ ರಾಕ್ಷಸಿ ಕೃತ್ಯ ಎಸಗಿದ್ದಾನೆ.ಏಕಾಏಕಿ ಮನೆಗೆ ಬಂದ ಅಪರಿಚಿತ ವ್ಯಕ್ತಿ ಹಸೀನಾರೊಂದಿಗೆ ಏರಿದ ಧ್ವನಿಯಲ್ಲಿ ಜಗಳವಾಡಿದ್ದಾನೆ. ಆಕೆ ಅಡುಗೆ ಮನೆಗೆ ಹೋದಾಗ ಹಿಂಬಾಲಿಸಿಕೊಂಡು ಹೋಗಿ ಯದ್ವಾತದ್ವಾ ಚೂರಿಯಿಂದ ಆಕೆಯನ್ನು ಇರಿದಿದ್ದಾನೆ, ತಡೆಯಲು ಬಂದ ಅಫ್ನಾನ್, ಆಯ್ನಾಝ್ ಅವರಿಗೂ ಇರಿದಿದ್ದಾನೆ. ಅಲ್ಲಿಯೇ ಇದ್ದ ಹಸೀನಾ ಅವರ ವೃದ್ಧ ಅತ್ತೆಗೂ ಚೂರಿಯಿಂದ ಗಾಯಗೊಳಿಸಿದ್ದಾನೆ. ಬೊಬ್ಬೆ ಕೇಳಿ ಹೊರಗೆ ಇದ್ದ ಅಸೀಮ್ ಒಳಗೆ ಬಂದಾಗ ಆತನ ಕುತ್ತಿಗೆ ಚೂರಿಯಿಂದ ಇರಿದು ಹೊರಗೆ ಹೋಗಿದ್ದಾನೆ.
ಬೊಬ್ಬೆ ಕೇಳಿ ಹೊರಗೆ ಬಂದ ಪಕ್ಕದ ಮನೆಯ ಯುವತಿಗೂ ಜೀವಬೆದರಿಕೆ ಒಡ್ಡಿದ ಕೊಲೆಗಾರ, ತಕ್ಷಣ ಅಲ್ಲಿಂದ ವೇಗವಾಗಿ ನಡೆದುಕೊಂಡು ಹೋಗಿ ಪರಾರಿಯಾಗಿದ್ದಾನೆ.ಅಫ್ನಾನ್ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಳು. ಆಯ್ನಾಜ್ ಬಿಕಾಂ ಪದವಿ ಮತ್ತು ಆಸೀಂ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಫ್ನಾನ್ ಶನಿವಾರ ರಾತ್ರಿಯಷ್ಟೇ ಊರಿಗೆ ಬಂದಿದ್ದಳು.
* ಆರೋಪಿ ಪತ್ತೆಗೆ 5 ತಂಡಗಳ ರಚನೆಘಟನಾ ಸ್ಥಳಕ್ಕೆ ಎಸ್ಪಿ ಅರುಣ್ ಕುಮಾರ್ ಭೇಟಿ ನೀಡಿದ್ದು, ವಿಧಿವಿಜ್ಞಾನ ತಜ್ಞರು ಸುಳಿವು ಪರಿಶೀಲಿಸಿದ್ದಾರೆ. ಆರೋಪಿಯ ಪತ್ತೆಗೆ ಸಮೀಪದ ಸಿಸಿ ಕ್ಯಾಮರ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಕೊಲೆಗಾರನನ್ನು ಅಲ್ಲಿಗೆ ಕರೆ ತಂದ ಆಟೋಚಾಲಕನನ್ನು ತನಿಖೆ ನಡೆಸಿದ್ದಾರೆ.
ಮನೆಯೊಳಗೆ ಯಾವುದೇ ಸೊತ್ತುಗಳು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ, ಆದ್ದರಿಂದ ಇದು ದರೋಡೆಗಾಗಿ ನಡೆದ ಕೊಲೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತ್ತೆಗೆ 5 ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.ಆರೋಪಿ ಇಲ್ಲಿಯೇ ಸಮೀಪದ ಸಂತೆಕಟ್ಟೆ ಎಂಬಲ್ಲಿಂದ ಶ್ಯಾಮ್ ಎಂಬವರ ಆಟೋರಿಕ್ಷಾದಲ್ಲಿ ನೇಜಾರಿಗೆ ಬಂದಿದ್ದ. ಶ್ಯಾಮ್ ಗೆ ಆತ ಹೇಳಿದ ವಿಳಾಸ ಸರಿಯಾಗಿ ತಿಳಿಯದಿದ್ದಾಗ ಆರೋಪಿಯೇ ಮನೆಯ ಗುರುತನ್ನು ಹೇಳಿದ್ದ. ಆದ್ದರಿಂದ ಆರೋಪಿ ಈ ಹಿಂದೆಯೂ ಅಲ್ಲಿಗೆ ಬಂದಿರಬೇಕು ಎಂದು ಶಂಕಿಸಲಾಗಿದೆ.
45ರ ಆಸುಪಾಸು ವಯಸ್ಸಿನ ಕೊಲೆಗಾರ ದೃಢಕಾಯನಾಗಿದ್ದ. ಕಂದು ಅಂಗಿ ಧರಿಸಿದ್ದು, ಮುಖಕ್ಕೆ ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ ಎಂದು ಆಟೋ ಚಾಲಕ ಹೇಳಿದ್ದಾನೆ. ಮುಖ ಕಾಣಬಾರದು ಎಂದು ಮಾಸ್ಕ್ ಧರಿಸಿದ್ದು ಕೊಲೆ ಮಾಡುವ ಉದ್ದೇಶದಿಂದಲೇ ಬಂದಿದ್ದಿರಬೇಕು ಎಂದು ಭಾವಿಸಲಾಗಿದೆ.ಆಟೋ ಚಾಲಕ ಆತನನ್ನು ಸ್ಥಳಕ್ಕೆ ಬಿಟ್ಟು ಬಂದ 15 ನಿಮಿಷಗಳಲ್ಲಿಯೇ ಸಂತೆಕಟ್ಟೆ ಆಟೋ ಸ್ಟ್ಯಾಂಡ್‌ಗೆ ಬಂದಿದ್ದ ಮತ್ತು ಆತುರಾತುರದಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದ. ಆರೋಪಿ ಬೆಂಗಳೂರು ಕನ್ನಡ ಮಾತನಾಡುತ್ತಿದ್ದ ಎಂದು ಆಟೋ ಚಾಲಕರು ತಿಳಿಸಿದ್ದಾರೆ.