ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುತಾಲೂಕಿನ ಕೂನಬೇವು ಗ್ರಾಮದ ರೈತ ಮಹಿಳೆ ಸಾವಕ್ಕ ನಿಂಗಪ್ಪ ಅಣಜಿ ಗುಲಾಬಿ ಬೆಳೆದು ಕೃಷಿಯಲ್ಲಿಯೂ ಹೆಚ್ಚಿನ ಲಾಭ ಮಾಡಬಹುದು ಎಂಬುದನ್ನು ಸಾಧಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಸಾವಕ್ಕ ತನ್ನ ಒಂದು ಎಕರೆ ಜಮೀನಿನಲ್ಲಿ 2023-24ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ಗುಲಾಬಿ ತೋಟ ಅಭಿವೃದ್ಧಿ ಪಡಿಸಿದ್ದರು. ಅದರಲ್ಲಿ ಕಳೆದ ಮೂರು ತಿಂಗಳಿಂದ ಪ್ರತಿವಾರ ಎರಡರಿಂದ ಮೂರು ಬಾರಿ ಒಂದರಿಂದ ಒಂದೂವರೆ ಕ್ವಿಂಟಲ್‌ವರೆಗೆ ಗುಲಾಬಿ ಹೂವು ಬೆಳೆಯುತ್ತಿದ್ದಾರೆ.ಈ ಗುಲಾಬಿ ಹೂವುಗಳನ್ನು ರಾಣಿಬೆನ್ನೂರು, ಹಾವೇರಿ, ದಾವಣಗೆರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಪ್ರತಿ ಕೆಜಿಗೆ ₹80ಗಳಿಂದ 140 ವರೆಗೆ ದರ ಲಭಿಸುತ್ತಿದ್ದು, ಹಬ್ಬ ಹರಿದಿನಗಳಲ್ಲಿ ಅದು ₹150ಗಳಿಂದ 200ವರೆಗೆ ಮಾರಾಟವಾಗುತ್ತಿದೆ.
ಅಧಿಕ ಲಾಭ:ಗುಲಾಬಿ ಹೂವುಗಳ ಮಾರಾಟದಿಂದ ಎಲ್ಲಾ ಖರ್ಚು ತೆಗೆದು ₹6 ಸಾವಿರದಿಂದ 7 ಸಾವಿರದವರೆಗೆ ಲಾಭ ಗಳಿಸುತ್ತಿದ್ದಾರೆ. ಹೀಗಾಗಿ ಪ್ರತಿ ತಿಂಗಳು ₹25ರಿಂದ 35 ಸಾವಿರ ಆದಾಯ ಬರುತ್ತಿದೆ. ಮಾರುಕಟ್ಟೆಯಲ್ಲಿ ಮಿರಬಲ್ ಮತ್ತು ಬಟನ್ ರೋಸ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಒಂದು ಎಕರೆಯಲ್ಲಿ ಗುಲಾಬಿ ಸಸಿಗಳು ಸುಮಾರು 2500 ದಿಂದ 3000 ವರೆಗೆ ನಾಟಿ ಮಾಡಿದರೆ ಉತ್ತಮ ಇಳುವರಿ ಬರುತ್ತದೆ.ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗಾಗಿ ಡ್ರಿಪ್ ಅಳವಡಿಸಿದಲ್ಲಿ ಮಿತವಾದ ನೀರಿನ ಬಳಕೆ ಮಣ್ಣಿನ ಸವಕಳಿ ತಡೆಯಲು ಸಾಧ್ಯ ಹಾಗೂ ಇದರಿಂದ ಇಳುವರಿಯು ಹೆಚ್ಚು ಬರುತ್ತದೆ ಎಂದು ರೈತ ಮಹಿಳೆ ಸಾವಕ್ಕ ತಿಳಿಸಿದ್ದಾರೆ.
ಅಧಿಕಾರಿಗಳ ಮಾರ್ಗದರ್ಶನ:ಗುಲಾಬಿ ಬೆಳೆಯಲು ರೈತ ಮಹಿಳೆ ಸಾವಕ್ಕನವರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ ಎಸ್.ಪಿ. ನೇತೃತ್ವದಲ್ಲಿ ತೋಟಗಾರಿಕೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ಮಾಡಿದ್ದರು. ಒಟ್ಟಾರೆ ರೈತ ಮಹಿಳೆ ಸಾವಕ್ಕ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಿಸಿಕೊಂಡಿದ್ದಲ್ಲದೆ ಗುಲಾಬಿ ಬೆಳೆದು ಹೆಚ್ಚಿನ ಲಾಭ ಗಳಿಸುತ್ತಿರುವುದು ರೈತ ವರ್ಗಕ್ಕೆ ಆತ್ಮಸ್ಥೈರ್ಯ ತುಂಬುವಂತೆ ಮಾಡಿದೆ.ಗುಲಾಬಿ ಕೃಷಿ ಮಾಡುವ ಪೂರ್ವದಲ್ಲಿ ಹತ್ತಿ, ಮೆಕ್ಕೆಜೋಳ, ಶೇಂಗಾ ಬೆಳೆಯುತ್ತಿದ್ದೆವು. ಆಗ ವರ್ಷಕ್ಕೆ ₹25 ಸಾವಿರದಿಂದ 30 ಸಾವಿರ ಆದಾಯ ಬರುತ್ತಿತ್ತು. ಈಗ ಗುಲಾಬಿ ಕೃಷಿಯಿಂದ ಪ್ರತಿ ತಿಂಗಳು ಕನಿಷ್ಠ ₹25 ಸಾವಿರದಿಂದ 30 ಸಾವಿರದವರೆಗೆ ಆದಾಯ ಬರುತ್ತಿದೆ. ಉದ್ಯೋಗ ಖಾತರಿ ಯೋಜನೆ ನಮ್ಮ ಯಶಸ್ಸಿಗೆ ಸಹಕಾರಿಯಾಗಿದೆ ಎನ್ನುತ್ತಾರೆ ರೈತ ಮಹಿಳೆ ಸಾವಕ್ಕ ಅಣಜಿ.
ಉದ್ಯೋಗ ಖಾತರಿಯಲ್ಲಿ ತೋಟಗಾರಿಕಾ ಬೆಳೆಗಳಾದ ಗುಲಾಬಿ, ರೇಷ್ಮೆ, ಪೇರಲು, ಎಲೆಬಳ್ಳಿ, ನುಗ್ಗೆ, ಕರಿಬೇವು ಮಾಡಿಕೊಳ್ಳುವ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಕೂನಬೇವು ಗ್ರಾಮದಲ್ಲಿ ಸಾವಕ್ಕ ಸೇರಿದಂತೆ ಸುಮಾರು 20ರಿಂದ 25 ಜನ ಗುಲಾಬಿ ಕೃಷಿ ಮಾಡಿ ಆರ್ಥಿಕ ಲಾಭ ಗಳಿಸಿದ್ದಾರೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ನೂರ ಅಹ್ಮದ್ ಹಲಗೇರಿ.