ಸುದ್ದಿಯೋಧರಾದ ಪತ್ರಿಕಾ ವಿತರಕರಿಗೊಂದು ಸಲಾಂ!

KannadaprabhaNewsNetwork |  
Published : Sep 04, 2026, 02:30 AM IST
ಪತ್ರಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಹುಡುಗರು. | Kannada Prabha

ಸಾರಾಂಶ

ಸಮಾಜದ ಘಟಾನಾವಳಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ಪತ್ರಿಕಾ ವಿತರಕರಿಗೆ ಒಂದು ಸಲಾಂ ಸಲ್ಲಿಸಲೇಬೇಕು. ಅವರ ಕಾಯಕ ನಿಜಕ್ಕೂ ಮಾದರಿ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ಎಐ ಜನರೇಷನ್ ಯುಗ ದಾಟಿ, ಅಲ್ಪಾ, ಅಲ್ಪಾ+ ಜನರೇಷನ್ ಯುಗದಲ್ಲಿಯೂ ಪತ್ರಿಕೆಗಳ ಮೌಲ್ಯ ಎತ್ತಿ ಹಿಡಿಯುವ ಕಾಯಕದಲ್ಲಿ ಪತ್ರಿಕಾ ವಿತರಕರ ಕಾರ್ಯ ಅಮೂಲ್ಯವಾದದ್ದು. ಸುದ್ದಿಗಳ ಹೊತ್ತಗೆ (ಪತ್ರಿಕೆ)ಗಳೊಂದಿಗೆ ದಿನ ನಿತ್ಯ ಮನೆ ಮನೆಗೆ ತೆರಳಿ ಮನೆ ಬಾಗಿಲಿಗೆ ಪತ್ರಿಕೆ ಹಂಚುವ ಪತ್ರಿಕಾ ವಿತರಕರು ತೆರೆ ಮರೆಯ ಕಾಯಕಜೀವಿಗಳು.

ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಪತ್ರಿಕೆಗಳನ್ನು ಸಂಗ್ರಹಿಸಿ ಬೈಕ್ ರೂಟ್ ಮೂಲಕ ನಿಗದಿತ ಸ್ಥಳಗಳಿಗೆ ಹಂಚುವ ಕಾರ್ಯ ಆರಂಭವಾಗುತ್ತದೆ. ನಿಗದಿತ ಸ್ಥಳಗಳಿಗೆ ಪತ್ರಿಕೆ ಬಂಡಲ್‌ಗಳನ್ನು ನಿಗದಿತ ಸಮಯಕ್ಕೆ ತಲುಪಿಸುತ್ತಾರೆ. ತಮಗೆ ತಲುಪಿದ ಬಂಡಲ್‌ ಬಿಚ್ಚಿ, ವಿಂಗಡಿಸಿ ತ್ವರಿತಗತಿಯಲ್ಲಿ ಹಂಚುವ ಕಾರ್ಯವನ್ನು ಏಜೆಂಟರು ನಿರ್ವಹಿಸುತ್ತಾರೆ. ಈ ಕಾರ್ಯ ನಿಜಕ್ಕೂ ಅಮೋಘ. ಬಂಡಲ್ ತೆರೆದು ಎಷ್ಟೆಷ್ಟು ಪತ್ರಿಕೆ ಯಾವ ಯಾವ ಸ್ಥಳಗಳಿಗೆ ಕಳುಹಿಸಬೇಕು ಎಂದು ವಿಂಗಡಿಸಿ, ತಾನು ಸಹ ಒಳಗೊಂಡು ವಿತರಕರೊಡಗೂಡಿ ಮನೆ ಮನೆಗೆ ಸೈಕಲ್, ಬೈಕ್‌ನಲ್ಲಿ, ಕಾಲ್ನಡಿಗೆಯಲ್ಲಿ ತೆರಳಿ ಪತ್ರಿಕೆಗಳನ್ನು ಹಂಚುತ್ತಾರೆ.

ಸಮಾಜದ ಘಟಾನಾವಳಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ಪತ್ರಿಕಾ ವಿತರಕರಿಗೆ ಒಂದು ಸಲಾಂ ಸಲ್ಲಿಸಲೇಬೇಕು. ಅವರ ಕಾಯಕ ನಿಜಕ್ಕೂ ಮಾದರಿ. ವಿದ್ಯಾರ್ಥಿಗಳೂ ಪತ್ರಿಕೆ ಹಂಚುವ ಕೆಲಸ ಮಾಡುತ್ತಾರೆ. ನಾವು ಬೆಳಗ್ಗೆ ಏಳುವ ಸಮಯಕ್ಕೆ ಮನೆ ಬಾಗಿಲಲ್ಲಿ ವೈವಿಧ್ಯಮಯ ಸುದ್ದಿಗಳನ್ನು ಹೊತ್ತ ಪತ್ರಿಕೆ ನಮ್ಮ ಮುಂದಿರುತ್ತದೆ. ತೆರೆಮರೆಯಲ್ಲೇ ಅಂತಹ ಕಾರ್ಯ ನಿರ್ವಹಿಸುವ ಪತ್ರಿಕಾ ವಿತರಕರು ಸಮಾಜದ ಕಣ್ಮಣಿ ಆಗಿದ್ದಾರೆ.

ಒಂದು ನಿಮಿಷ ಆತನ ಕಾಯಕವನ್ನೊಮ್ಮೆ ನೋಡಿದರೆ, ಅದು ದುಡ್ಡಿಗಾಗಿ ಮಾಡುವ ಕೆಲಸವಲ್ಲ. ತಿಂಗಳು ನಂತರ ಬಿಲ್‌ಗಾಗಿ ಬರುವ ಪತ್ರಿಕಾ ವಿತರಕರನ್ನು ಸತಾಯಿಸುವವರೂ ಇದ್ದಾರೆ. ಒಂದೇ ದಿನ ಪತ್ರಿಕೆ ತಡವಾಗಿ ಬಂದರೆ ಅದೇ ವಿತರಕನಿಗೆ ಜೋರು ಮಾಡುವವರೂ ಇದ್ದಾರೆ. ಇನ್ನೂ ಓದುಗನ ಅಭಿರುಚಿಗೆ ತಕ್ಕಂತೆ, ಅವರ ಮನೆಗೆ ಪತ್ರಿಕೆ ತಲುಪಿಸಿ, ಸದ್ಭಾವದಿಂದ ಬದುಕುತ್ತಿರುವ ವಿತರಕರು ಕಾಯಕ ಜೀವಿಗಳು.

ಬೊಗಳುವ, ಕಡಿಯಲು ಬರುವ ನಾಯಿಗಳನ್ನು ಎದುರಿಸಿ, ಚಳಿ, ಮಳಿ ಲೆಕ್ಕಿಸದೆ ಕಾರ್ಯ ಮಾಡುವ ಪತ್ರಿಕಾ ವಿತರಕರು ಕೊರೋನಾ ವೇಳೆಯಲ್ಲಿ ಕೊರೋನಾ ವಾರಿಯರ್ಸ್‌ ಆಗಿ ಮಾಡಿದ ಸೇವೆ ಅನನ್ಯ.

ಇಂದು ಸೆ. 4, ವಿಶ್ವ ಪತ್ರಿಕಾ ವಿತರಕರ ದಿನಾಚರಣೆ. ನಿತ್ಯ ನಮ್ಮ ಮನೆ ಎದುರು ಓಡಾಡುವ, ನಮ್ಮ ಮನೆಗೆ ಪತ್ರಿಕೆ ಹಾಕುವ ಹುಡುಗರನ್ನೊಮ್ಮೆ ನಿಲ್ಲಿಸಿ ಎಷ್ಟಕ್ಕೆ ಏಳುತ್ತೀಯಾ? ಎಷ್ಟು ದೂರದಿಂದ ಬರುತ್ತೀಯಾ? ಎಂದು ಯೋಗಕ್ಷೇಮ ವಿಚಾರಿಸಿದರೆ ಅದುವೇ ಅವರಿಗೆ ನೀಡುವ ಗೌರವವಾಗುತ್ತದೆ.

ಇತ್ತ ಸರ್ಕಾರ ಸಹ ಪತ್ರಿಕಾ ವಿತರಕರ ಹಿತ ಕಾಯುವ ಜತೆಗೆ, ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕು. ಪತ್ರಿಕಾ ವಿತರಕರ ಶ್ರಮ ಪರಿಗಣಿಸಿ, ಅವರನ್ನು ಮುನ್ನೆಲೆಗೆ ತರುವ ಕಾರ್ಯ ಆಗಬೇಕಿದೆ. ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು. ಮಳೆ, ಚಳಿ, ಗಾಳಿ, ಇವೆಲ್ಲವನ್ನೂ ಲೆಕ್ಕಿಸದೇ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಪತ್ರಿಕಾ ವಿತರಕರ ಕಷ್ಟ ಮತ್ತು ಸೇವೆ ಸ್ಮರಣೀಯ.

ಕಲ್ಯಾಣ ಯೋಜನೆ ಬೇಕು: ಪತ್ರಿಕಾ ವಿತರಕರ ವೃತ್ತಿಯನ್ನು ಸೇವಾ ವೃತ್ತಿಯೆಂದು ಪರಿಗಣಿಸಿ, ಕಾರ್ಮಿಕ ಇಲಾಖೆಯ ಮೂಲಕ ಸಬ್ಸಿಡಿ ದರದಲ್ಲಿ ಬೈಕ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಪತ್ರಿಕಾ ವಿತರಕರ ನಿಸ್ವಾರ್ಥ ಸೇವೆಗೆ ಸರ್ಕಾರ ಸೂಕ್ತ ಮಾನ್ಯತೆ ನೀಡಿ, ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಕೊಪ್ಪಳದ ಪತ್ರಿಕಾ ವಿತರಕ ಮಂಜುನಾಥ ಟಪಾಲ್ ಹೇಳಿದರು.

ಶ್ರಮ ಗುರುತಿಸಬೇಕು: ಪತ್ರಿಕಾ ವಿತರಕರಿಗೆ ವಿಮೆ ಸೌಲಭ್ಯ, ಶ್ರಮಿಕ್ ಯೋಜನೆಯಲ್ಲಿ ಸವಲತ್ತು ನೀಡಿದರೆ ಅನುಕೂಲ ಆಗುತ್ತದೆ. ಪತ್ರಿಕೆ ಇನ್ನೂ ಯಾಕೆ ಬಂದಿಲ್ಲಾ ಎಂದು ಕೇಳುವ ಜನರಿದ್ದಾರೆಯೇ ಹೊರತು ಯಾಕಪ್ಪ ಏನಾದರೂ ತೊಂದರೆ ಆಯಿತಾ? ಅನ್ನುವವರು ಇಲ್ಲ. ಪತ್ರಿಕಾ ವಿತರಕರ ಶ್ರಮ ಗುರುತಿಸಬೇಕಿದೆ ಎಂದು ಕುಕನೂರು ಪತ್ರಿಕಾ ವಿತರಕ ಚಂದ್ರು ಆರುಬೆರಳಿನ ಹೇಳುತ್ತಾರೆ.ಅವಿಭಾಜ್ಯ ಅಂಗ: ನನಗೀಗ 87 ವರ್ಷ. 1971 ನ. 1ರಿಂದ (57 ವರ್ಷ) ಈಗಲೂ ನಾನೇ ಸ್ವತಃ ಕನ್ನಡಪ್ರಭ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ. ಹೈದರಾಬಾದ್ ಕರ್ನಾಟಕ ವಿಮೋಚನೆ ಹೋರಾಟದಲ್ಲಿ ನಡೆದ ಫೈರಿಂಗ್‌ನಲ್ಲಿ ನನಗೆ ಗುಂಡು ತಗುಲಿತ್ತು. ಪತ್ರಿಕಾ ವಿತರಣೆಯ ಸೇವೆ ನನ್ನ ಜೀವನ ಅವಿಭಾಜ್ಯ ಅಂಗ ಎಂದು ಕಾರಟಗಿ ಕನ್ನಡಪ್ರಭ ಪತ್ರಿಕಾ ವಿತರಕ ಎ.ಜಿ. ಕಾರಟಗಿ ಹೇಳುತ್ತಾರೆ.ಸೌಲಭ್ಯ ಒದಗಿಸಬೇಕು: ಕಳೆದ 16 ವರ್ಷಗಳಿಂದ ಪತ್ರಿಕೆ ಹಂಚುತ್ತಿದ್ದೇವೆ. ಬೆಳಗ್ಗೆ ಓದುಗರ ಕೈಗೆ ಪತ್ರಿಕೆ ತಲುಪಿಸಿದಾಗ ನಮ್ಮ ಶ್ರಮ ಸಾರ್ಥಕವೆನಿಸುತ್ತದೆ. ಆದರೆ ವಿತರಕರ ಬದುಕಿನ ಕಷ್ಟಗಳಿಗೂ ಸರ್ಕಾರ ಗಮನ ನೀಡಬೇಕು. ಆರೋಗ್ಯ ಭದ್ರತೆ, ವಿಮಾ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಕುಷ್ಟಗಿಯ ಪತ್ರಿಕಾ ವಿತರಕ ಜಮದಗ್ನಿ ಗುರಿಕಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ್ಗಕ್ಕೆ ಗ್ಯಾರಂಟಿ ಯೋಜನೆ ವರದಾನ: ಪಿ.ಟಿ. ಪರಮೇಶ್ವರ ನಾಯ್ಕ
ಬಿಜೆಪಿ ಪಾದಯಾತ್ರೆ ಇಂದು ಕಾರಟಗಿ ಪ್ರವೇಶ