ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹಾನಗಲ್ಲ ಬರ ಘೋಷಣೆಯಾಗಿಲ್ಲ

KannadaprabhaNewsNetwork |  
Published : Sep 04, 2026, 02:30 AM IST
ಹಾನಗಲ್ಲಿನಲ್ಲಿ ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಸಿದ್ದಲಿಂಗಪ್ಪ ಕಮಡೊಳ್ಳಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.  | Kannada Prabha

ಸಾರಾಂಶ

ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಕೃಷಿಗೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವೇ ಹಾನಗಲ್ಲ ತಾಲೂಕು ಹಸಿರು ಬರ ಘೋಷಣೆಯಾಗದೇ ರೈತ ಪರಿತಪಿಸುವಂತಾಗಿದೆ ಎಂದು ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಸಿದ್ದಲಿಂಗಪ್ಪ ಕಮಡೊಳ್ಳಿ ಕಿಡಿ ಕಾರಿದರು.

ಹಾನಗಲ್ಲ: ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಕೃಷಿಗೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವೇ ಹಾನಗಲ್ಲ ತಾಲೂಕು ಹಸಿರು ಬರ ಘೋಷಣೆಯಾಗದೇ ರೈತ ಪರಿತಪಿಸುವಂತಾಗಿದೆ ಎಂದು ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಸಿದ್ದಲಿಂಗಪ್ಪ ಕಮಡೊಳ್ಳಿ ಕಿಡಿ ಕಾರಿದರು.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ ಪಕ್ಕದ ಅತಿಹೆಚ್ಚು ಮಳೆಯಾಗುವ ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸುವಲ್ಲಿ ಅಲ್ಲಿನ ಜನಪ್ರತಿನಿಧಿಗಳ ಕಾಳಜಿ ಮುಖ್ಯವಾಗಿದೆ. ಆದರೆ ಹಾನಗಲ್ಲ ತಾಲೂಕಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿ, ಬಿತ್ತಿದ ಬೆಳೆ ಕುಂಠಿತವಾಗಿ, ಫಸಲು ಸಮರ್ಪಕವಾಗಿ ಕೈಸಿಗದಂತೆ ಆಗಿದ್ದರೂ ಬರಪೀಡಿತ ಎಂದು ತಾಲೂಕು ಘೋಷಣೆಯಾಗಲಿಲ್ಲ. ತಾಲೂಕು ಆಡಳಿತ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ರೈತರ ಪರವಾಗಿ ನಿಲ್ಲದಿರುವುದು ವಿಷಾದದ ಸಂಗತಿ. ತಾಲೂಕಿನ ಶಾಸಕರು ರೈತಪರ ಕಾಳಜಿ ಇಲ್ಲದೇ ಹೋದುದರಿಂದ ಹಾನಗಲ್ಲ ತಾಲೂಕು ಹಸಿರು ಬರಪೀಡಿತ ಎಂದು ಘೋಷಣೆಯಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಾನಗಲ್ಲ ತಾಲೂಕಿನ ಆಡಳಿತದಲ್ಲಿ ಅಭಿವೃದ್ಧಿ ಪರ್ವವನ್ನೇ ಸಾಧಿಸಿದ ದಿ.ಸಿ.ಎಂ. ಉದಾಸಿ ಹಾಗೂ ದಿ.ಮನೋಹರ ತಹಸೀಲ್ದಾರ್ ಅವರು ಅಭಿವೃದ್ಧಿ ಪಡಿಸಿದ ರಸ್ತೆಗಳ ಗುಂಡಿಗಳನ್ನು ಮುಚ್ಚಲೂ ಸಹ ಈಗಿನ ಶಾಸಕರಿಂದ ಸಾಧ್ಯವಾಗುತ್ತಿಲ್ಲ. ರಸ್ತೆಗಳಲ್ಲಿ ಎಣಿಸಲಾರದಷ್ಟು ಗುಂಡಿ ಬಿದ್ದು, ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದರಿಂದ ಅಪಘಾತಗಳೂ ಹೆಚ್ಚುತ್ತಿವೆ. ಗುಂಡಿ ಮುಚ್ಚಲು ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯವಹಿಸಿವೆ. ರಸ್ತೆ ಬದಿಯ ಜಂಗಲ್ ಕಟಾವ್ ಮಾಡದ ಕಾರಣ ವಾಹನಗಳು ಅಪಘಾತಕ್ಕೀಡಾಗುವ ಘಟನೆಗಳು ಪ್ರತಿದಿನ ನಡೆಯುತ್ತಿದ್ದರೂ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ಹೆಸರಲ್ಲಿ ಪರವಾನಿಗೆಯಿಲ್ಲದೇ ಸರ್ಕಾರಿ ರಸ್ತೆಗಳನ್ನು ಬಗೆದಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ಧರ್ಮಾ ಜಲಾಶಯದಿಂದ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಕುಂಠಿತವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರಿ ವೈದ್ಯಕೀಯ ವ್ಯವಸ್ಥೆ ಬಡವರ ಪಾಲಿಗೆ ಸಮರ್ಪಕವಾಗಿ ದೊರಕುತ್ತಿಲ್ಲ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಆಂಬುಲೆನ್ಸಗಳಿಲ್ಲ. ನೀರಾವರಿ ಇಲಾಖೆ ನಿರ್ಮಿಸಿದ ರಾಜಕಾಲುವೆ ಕುಸಿದು ಬಿದ್ದರೂ ಕೇಳುವವರಿಲ್ಲ, ಅಧಿಕಾರಿಗಳು-ಗುತ್ತಿಗೆದಾರರ ಮೇಲೆ ಕ್ರಮವಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿವೆ. ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಮಡೊಳ್ಳಿ ಆಪಾದಿಸಿದರು.ಒಂದು ವಾರದ ಗಡುವಿನಲ್ಲಿ ತಾಲೂಕಿನ ರಸ್ತೆ, ವಿದ್ಯುತ್, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಜನಧ್ವನಿ ಹೋರಾಟ ವೇದಿಕೆಯಿಂದ ಸರ್ಕಾರಿ ಕಚೇರಿಗಳ ಎದುರು ಧರಣಿ ಪ್ರತಿಭಟನೆ ನಡೆಸುವುದಾಗಿ ಸಿದ್ದಲಿಂಗಪ್ಪ ಕಮಡೊಳ್ಳಿ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಸಿ.ಕೆ. ಪಾಟೀಲ, ಸುರೇಶ ಪಾಳಾ, ವಿ.ಎಂ. ಪಾಟೀಲ, ಸಿ.ಬಿ. ಪಾಟೀಲ, ಮಹೇಶ ಹಿರೇಮಠ, ಶಾಂತಯ್ಯ ಹಿರೇಮಠ, ಸಿದ್ದಲಿಂಗೇಶ ತುಪ್ಪದ, ಬಸವಣ್ಣೆಪ್ಪ ಹೊಸಮನಿ, ವಿಶ್ವನಾಥ ಭಿಕ್ಷಾವತೀಮಠ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ್ಗಕ್ಕೆ ಗ್ಯಾರಂಟಿ ಯೋಜನೆ ವರದಾನ: ಪಿ.ಟಿ. ಪರಮೇಶ್ವರ ನಾಯ್ಕ
ಬಿಜೆಪಿ ಪಾದಯಾತ್ರೆ ಇಂದು ಕಾರಟಗಿ ಪ್ರವೇಶ