ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ನಗರದ ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ ಅವರ ಹಜ್ ಯಾತ್ರೆಗೆ ಕಳಿಸುವ ಮೂಲಕ ವಿಭಿನ್ನ ಮತ್ತು ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ, ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ
ಕನ್ನಡಪ್ರಭ ವಾರ್ತೆ ಗದಗ
ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ನಗರದ ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ ಅವರ ಹಜ್ ಯಾತ್ರೆಗೆ ಕಳಿಸುವ ಮೂಲಕ ವಿಭಿನ್ನ ಮತ್ತು ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ರಾಜು ಖಾನಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಮಾರುಕಟ್ಟೆ ಪ್ರದೇಶದ ವಿವಿಧ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹಿಸಿದರು. ಸಚಿವ ಬಸವರಾಜ ರಾಯರಡ್ಡಿ ಹಜ್ ಯಾತ್ರೆಗೆ ಹೋಗುವ ಆಸೆ ವ್ಯಕ್ತಪಡಿಸಿರುವ ಹಿನ್ನೆಲೆ, ಅವರ ಯಾತ್ರೆಗೆ ಹಣ ಹೊಂದಿಸುವ ಉದ್ದೇಶದಿಂದ ಈ ರೀತಿಯ ಬಿಕ್ಷಾಟನೆ ನಡೆಸುತ್ತಿದ್ದೇವೆ ಎಂದು ಕಾರ್ಯಕರ್ತರು ಅಂಗಡಿಗಳಿಗೆ ತೆರಳಿ ಸಾರ್ವಜನಿಕರಿಗೆ ತಿಳಿಸುತ್ತಾ ವ್ಯಂಗ್ಯವಾಗಿ ಪ್ರತಿಭಟನೆ ನಡೆಸಿದರು.
ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸಚಿವ ಬಸವರಾಜ ರಾಯರಡ್ಡಿ ಹಜ್ ಯಾತ್ರೆಗೆ ತೆರಳುವ ಕುರಿತು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಸಚಿವರ ಈ ಹೇಳಿಕೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಗದಗದಲ್ಲೂ ಅದರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಮುಸ್ಲಿಂ ಓಲೈಕೆಯ ಭರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಚಿವ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಚಿವ ರಾಯರಡ್ಡಿ ಅವರು ಕೂಡಲೇ ಕ್ಷಮೆ ಕೇಳಬೇಕು.
ಅವರು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಇಲ್ಲವಾದಲ್ಲಿ ಅವರು ಮುಂದೆ ಗದಗ ಜಿಲ್ಲೆಗೆ ಬಂದ ಸಂದರ್ಭದಲ್ಲಿ ನಾವು ಉಗ್ರವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಈ ಪ್ರತಿಭಟನೆಯಲ್ಲಿ ಶಿವರಾಮಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.