ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡಲು ಆಗ್ರಹ

KannadaprabhaNewsNetwork |  
Published : Sep 04, 2026, 02:30 AM IST
ಪ್ರಸಕ್ತ ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡಿ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಪ್ರಸಕ್ತ ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡಿ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಾವೇರಿ: ಪ್ರಸ್ತುತ ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡುವ ಮೂಲಕ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಪ್ರಾರಂಭ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಬೆಟಗೇರಿ ಮಾತನಾಡಿ, ಕಳೆದ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಹೆಚ್ಚುವರಿ 100 ರು. ದರದ ಪೈಕಿ ಸರ್ಕಾರದಿಂದ ಟನ್ ಕಬ್ಬಿಗೆ 50 ರು.ನಂತೆ ಬಂದಿದ್ದು, ಕಾರ್ಖಾನೆಯವರು ನೀಡಬೇಕಿದ್ದ 50 ರು. ಹೆಚ್ಚುವರಿ ಹಣ ಇದುವರೆಗೂ ಬಂದಿಲ್ಲ. ಸಂಗೂರು ಸಕ್ಕರೆ ಕಾರ್ಖಾನೆ ಸೇರಿದಂತೆ ಯಾವುದೇ ಕಾರ್ಖಾನೆಗೆ ಕಬ್ಬು ಸಾಗಾಟ ಮಾಡಿ 14 ದಿನದೊಳಗೆ ಬಿಲ್ ಪಾವತಿಸಬೇಕಿದ್ದು, ಬಹುತೇಕ ರೈತರಿಗೆ ಇಲ್ಲಿಯತನಕ ಹಣ ಬಾರದೆ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ 2025-26ನೇ ಸಾಲಿನಲ್ಲಿ ಬಾಕಿ ಇರುವ ಕಬ್ಬಿನ ಬಿಲ್‌ನ್ನು ಒಂದೇ ಕಂತಿನಲ್ಲಿ ಸಂಪೂರ್ಣವಾಗಿ ಹಣ ಜಮೆ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.

2026-27ನೇ ಸಾಲಿನಲ್ಲಿ ಈಗಿನ ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಮಾಡುವ ಮೂಲಕ ಸಂಗೂರು ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಕಾರ್ಖಾನೆ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿರುವ ಎಲ್ಲಾ ರೈತ ಸಂಘಟನೆಗಳ ಸಭೆ ಕರೆದು, ಚರ್ಚೆ ನಡೆಸುವ ಮೂಲಕ ದರ ನಿಗದಿ ಮಾಡಬೇಕು. ಪ್ರಸ್ತುತ ಸಕ್ಕರೆ ರೇಟು ಹೆಚ್ಚಿರುವ ಕಾರಣ ಪ್ರತಿ ಟನ್ ಕಬ್ಬಿಗೆ 5,500 ರು. ದರವನ್ನು ನಿಗದಿ ಮಾಡಬೇಕು. ಕಾರ್ಖಾನೆಯವರು ರಿಕವರಿಯಲ್ಲಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟುವ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅಸುಂಡಿ ಮಾತನಾಡಿ, ಸಂಗೂರು ಸಕ್ಕರೆ ಕಾರ್ಖಾನೆಯಲ್ಲಾಗಲಿ, ಡಿಸಿ ಆಫೀಸ್‌ನಲ್ಲಾಗಲಿ ಎಲ್ಲಿಯಾದರೂ ಸರ್ಕಾರದಿಂದ ಒಂದು ರಿಕವರಿ ಲ್ಯಾಬ್‌ನ್ನು ಸ್ಥಾಪನೆ ಮಾಡಬೇಕು. ಬಹಳ ಪ್ರಮುಖವಾಗಿ ಸಂಗೂರು ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ರಟ್ಟಿಹಳ್ಳಿ ತಾಲೂಕು ಭೈರನಪಾದದಲ್ಲಿರುವ ಜಿಎಂ ಯೂನಿಟ್-2ಗೆ ಯಾವುದೇ ಕಾರಣಕ್ಕೂ ಸರಬರಾಜು ಮಾಡಬಾರದು. ಸಂಗೂರು ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಇದೆ ಕಾರ್ಖಾನೆಗೆ ಸರಬರಾಜು ಮಾಡಬೇಕು. ಒಂದುವೇಳೆ ಕಬ್ಬಿಗೆ ದರ ನಿಗದಿ ಮಾಡದೆ ಕಾರ್ಖಾನೆ ಪ್ರಾರಂಭಿಸಿದರೆ ಜಿಲ್ಲಾದ್ಯಂತ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಅಶೋಕರಡ್ಡಿ ಮರಚರಡ್ಡೇರ ಸೇರಿದಂತೆ ಕಬ್ಬು ಬೆಳೆಗಾರ ರೈತ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ್ಗಕ್ಕೆ ಗ್ಯಾರಂಟಿ ಯೋಜನೆ ವರದಾನ: ಪಿ.ಟಿ. ಪರಮೇಶ್ವರ ನಾಯ್ಕ
ಬಿಜೆಪಿ ಪಾದಯಾತ್ರೆ ಇಂದು ಕಾರಟಗಿ ಪ್ರವೇಶ