ಹಾವೇರಿ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳ ಇಳುವರಿ ಕುಂಠಿತವಾಗಿದೆ. ಹಾವೇರಿ ಹಾಗೂ ಸವಣೂರು ತಾಲೂಕುಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ಎರಡೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ನಾರಾಯಣಿ ಒತ್ತಾಯಿಸಿದರು.
ಪ್ರಸಕ್ತ ವರ್ಷ ಅರೆಬರೆ ಮಳೆಯಿಂದ ಮೆಕ್ಕೆಜೋಳ, ಸೋಯಾಬಿನ್, ಹತ್ತಿ ಹಾಗೂ ಶೇಂಗಾ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿಯೂ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಇಲ್ಲ ಎಂಬ ರೀತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಬೆಳೆ ಹಸಿರಾಗಿದ್ದರೂ ತೆನೆ, ಕಾಳು ಕಟ್ಟುತ್ತಿಲ್ಲ. ಮೆಕ್ಕೆಜೋಳದಲ್ಲಿ ಕೇವಲ ಒಣಗಿದ ಬೆಂಡು ಮಾತ್ರ ಇದೆ. ಸೋಯಾಬಿನ್‌ನಲ್ಲಿ ಸರಿಯಾಗಿ ಕಾಳು ಮೂಡಿಲ್ಲ. ಜಿಲ್ಲೆಯ ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ಹಾವೇರಿ ಮತ್ತು ಸವಣೂರು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಸಚಿವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡ ಹನುಮಂತಪ್ಪ ದಾಸರ ಮಾತನಾಡಿ, ತಾಲೂಕಿನ ಪೂರ್ವ ಭಾಗದಲ್ಲಿರುವ ಬಸಾಪುರ, ಶಿಬಾರ, ಯಲಗಚ್ಚ, ಕೂರಗುಂದ, ಭರಡಿ ಸೇರಿದಂತೆ ಜಿಲ್ಲೆಯಲ್ಲಿ ಬರದ ಛಾಯೆ ಇದ್ದು, ಸರ್ಕಾರ ಕೂಡಲೇ ಹಾವೇರಿ, ಸವಣೂರು ತಾಲೂಕುಗಳನ್ನು ಶೀಘ್ರವೇ ಬರಪೀಡಿತ ಎಂದು ಘೋಷಿಸಬೇಕು. ಇಲ್ಲದಿದ್ದರೆ, ಬಳ್ಳಾರಿ ಚಲೋ ಮಾದರಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ವೆಂಕಟೇಶ ನಾರಾಯಣಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಮುಖಂಡರಾದ ಆನಂದ ಕಲಾಲ, ಲಲಿತಾ ಗುಂಡೇನಹಳ್ಳಿ, ಶ್ರೀದೇವಮ್ಮ ರಡ್ಡಿ, ದಯಾನಂದ ಭಜಂತ್ರಿ, ರಾಜು ಕಳ್ಳಿಮನಿ ಉಪಸ್ಥಿತರಿದ್ದರು.