ಕಾಂಗ್ರೆಸ್‌ ನಾಯಕರು ಡಿಫೆಕ್ಟ್ ಪೀಸ್‌ಗಳು

KannadaprabhaNewsNetwork |  
Published : Sep 04, 2026, 02:30 AM IST
ಸಂಡೂರಿನ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಪಾದಯಾತ್ರೆಯ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ವಾಲ್ಮೀಕಿ ನಿಗಮದ ₹೧೮೭ ಕೋಟಿ ಹಣ ಲೂಟಿ ಹೊಡೆದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾದಲ್ಲಿ ಚುನಾವಣೆಗೆ ಬಳಸಿಕೊಳ್ಳಲಾಗಿದೆ

ಸಂಡೂರು: ತಮ್ಮನ್ನು ರಿಜೆಕ್ಟೆಡ್‌ ಪೀಸ್‌ಗಳೆಂದು ಜರಿದ ಕಾಂಗ್ರೆಸ್‌ನವರು ಡಿಫೆಕ್ಟ್‌ ಪೀಸ್‌ಗಳು. ಮುಂದಿನ ಚುನಾವಣೆಯಲ್ಲಿ ಇವರನ್ನು ಜನತೆ ಗುಜರಿಗೆ ಹಾಕುತ್ತಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿ ಆವರಣದಲ್ಲಿ ಬಿಜೆಪಿಯಿಂದ ಸೆ.1ರಿಂದ 10ರ ವರೆಗೆ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನೀವೆ ಟೈಮ್‌ ಫಿಕ್ಸ್ ಮಾಡಿ: ನನಗೆ ವಿಧಾನಸಭಾ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾಂಗ್ರೆಸ್‌ನವರು ಒತ್ತಾಯಿಸುತ್ತಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರಪಯೋಗ ಮಾಡಿಕೊಂಡ ಚುನಾವಣೆ ಗೆದ್ದಿರುವ ಕಾಂಗ್ರೆಸ್‌ನವರು ದಿನಾಂಕ ಹಾಗೂ ಟೈಮ್‌ ಫಿಕ್ಸ್‌ ಮಾಡಲಿ. ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರು ಹಾಗೂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕರು ಸ್ಪೀಕರ್‌ಗೆ ರಾಜೀನಾಮೆ ನೀಡಲಿ. ನಾನು ಅವರೊಂದಿಗೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಸವಾಲು ಹಾಕಿದರು.

ಭಿಕ್ಷೆ ನೀಡಿದ್ದು ಬಿಜೆಪಿ: ಶಾಸಕ ನಾಗೇಂದ್ರಗೆ ರಾಜಕೀಯ ಭಿಕ್ಷೆ ನೀಡಿದ್ದು ಬಿಜೆಪಿ. ವಾಲ್ಮೀಕಿ ನಿಗಮದ ₹೧೮೭ ಕೋಟಿ ಹಣ ಲೂಟಿ ಹೊಡೆದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾದಲ್ಲಿ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಇದೀಗ ಈ ಹಣದಲ್ಲಿ ಕೆಲ ಭಾಗ ಮುಂಬೈಗೂ ಹೋಗಿದೆ ಎಂಬುದು ಗೊತ್ತಾಗಿದೆ. ಈ ಹಣ ಸ್ವೀಕರಿಸಿದ್ದ ನವಿಮುಂಬೈನ ನೇಹಾ ಕಲಾಮ್ ಮನ್ಸೂರಿ, ಜೌಹಾರ್ ಕಲಾಮ್ ಮನ್ಸೂರಿ ಹಾಗೂ ಕಲಾಮ್ ಶಕುರ್ ಮನ್ಸೂರಿ ಬಂಧನದ ಭೀತಿಯಲ್ಲಿ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಸೆ.೭ರಿಂದ ೯ರವರೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿನ ಹಳೆ ದರೋಜಿ, ಹೊಸದರೋಜಿ ಹಾಗೂ ಕುಡುತಿನಿ ಕ್ಷೇತ್ರಗಳಲ್ಲಿ ಪಾದಯಾತ್ರೆ ಸಾಗಲಿದೆ. ಸೆ. ೧೦ ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶ ಯಶಸ್ವಿಗೊಳಿಸಲು ಕ್ಷೇತ್ರದ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಪಾದಯಾತ್ರೆ ೨೦೨೮ರ ಚುನಾವಣೆಗೆ ದಿಕ್ಸೂಚಿ: ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹಾಗೂ ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ ಮಾತನಾಡಿ, ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ೨೦೨೮ರ ಚುನಾವಣೆಗೆ ದಿಕ್ಸೂಚಿಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹೊಡೆಯಲಾಗಿದೆ. ಅನ್ನಪೂರ್ಣ ತುಕಾರಾಂ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸ್‌ ಹಾಕಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಯಾರೂ ಉತ್ಸಾಹ ಕಳೆದುಕೊಳ್ಳಬಾರದು. ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಸಮಾವೇಶದ ಯಶಸ್ವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ಹನುಮಂತಪ್ಪ, ಉಡೇದ ಸುರೇಶ್, ತಿರುಮಲ ಹಾಗೂ ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಧರಪ್ಪ ನಾಯಕ, ದಮ್ಮೂರು ಶೇಖರ್, ಜಿ.ಸಿ.ಬಿ ರಾಮಕೃಷ್ಣ, ಶರಣ್‌ಗೌಡ, ಪ್ರವೀಣ್, ನರಸಿಂಹ, ರಮೇಶ್, ವಸಂತಕುಮಾರ್, ಪುರುಷೋತ್ತಮ, ವಿ.ಎಸ್.ಶಂಕರ್ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ್ಗಕ್ಕೆ ಗ್ಯಾರಂಟಿ ಯೋಜನೆ ವರದಾನ: ಪಿ.ಟಿ. ಪರಮೇಶ್ವರ ನಾಯ್ಕ
ಬಿಜೆಪಿ ಪಾದಯಾತ್ರೆ ಇಂದು ಕಾರಟಗಿ ಪ್ರವೇಶ