ಹುಬ್ಬಳ್ಳಿ:
ಇವು ಹುಬ್ಬಳ್ಳಿ-ಧಾರವಾಡ ನೂತನ ಕಮಿಷನರ್ ಆಗಿ ಗುರುವಾರ ಅಧಿಕಾರ ವಹಿಸಿಕೊಂಡ ಬೋರ್ಸೆ ಭೂಷಣ್ ಗುಲಾಬರಾವ್ ಜನತೆಗೆ ನೀಡಿರುವ ಅಭಯ.
ಕಮಿಷನರೇಟ್ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಈ ಮೂಲಕ ನಾಗರಿಕ ಕೇಂದ್ರಿತ ನಗರವಾಗಿ ರೂಪಿಸಲು ಕ್ರಮವಹಿಸಲಾಗುವುದು ಎಂದ ಅವರು, ಈಗಾಗಲೇ ಬೆಳಗಾವಿಯಲ್ಲಿ ಇದನ್ನು ಸಮರ್ಪಕವಾಗಿ ಜಾರಿಗೊಳಿಸಿ ಯಶಸ್ಸು ಕಂಡಿದ್ದು, ಅದನ್ನು ಮೊದಲ ಆದ್ಯತೆಯೊಂದಿಗೆ ಇಲ್ಲಿಯೂ ಜಾರಿ ತರಲಾಗುವುದು. ಈ ನಿಟ್ಟಿನಲ್ಲಿ ತಜ್ಞರ ಮತ್ತು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ನಾಗರಿಕ ಕೇಂದ್ರಿತ ನಗರ ವ್ಯವಸ್ಥೆ ಜಾರಿ ಜತೆಗೆ ಮಹಿಳೆಯರು-ಮಕ್ಕಳ ರಕ್ಷಣೆ ಮತ್ತು ಮಾದಕ ವಸ್ತು, ಸೈಂಬರ್ ವಂಚನೆ ತಡೆಗೆ ಬಿಗಿ ಕ್ರಮ ವಹಿಸಲಾಗುವುದು. ಮಾದಕ ವಸ್ತು ಸೇವನೆ, ಸಾಗಣೆ ಸ್ಥಳೀಯವಲ್ಲ, ಇದೊಂದು ರಾಷ್ಟ್ರೀಯ ಸಮಸ್ಯೆ. ಹೀಗಾಗಿ ಇದರ ತಡೆಗೆ ಕೋಕಾ ಕೇಸ್‌ನಂಥ ಕಠಿಣ ಕ್ರಮಕೈಗೊಳ್ಳಲಾಗುವುದು. ಅಧಿಕಾರಿಗಳು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದನ್ನು ಬೇರು ಸಹಿತ ಕಿತ್ತೆಸೆಯಲು ಶ್ರಮಿಸಲಾಗುವುದು ಎಂದು ಹೇಳಿದರು.ಬೆಂಗಳೂರು ನಂತರದಲ್ಲಿ ಹುಬ್ಬಳ್ಳಿ-ಧಾರವಾಡ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇದು ಅತೀಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಾನೂನು ಸುವಸ್ಥೆ ಕಾಪಾಡಲು ಸಮರ್ಪಕ ಪೊಲೀಸ್ ವ್ಯವಸ್ಥೆ ರೂಪಿಸಲಾಗುವುದು. ಹಾಗೆಯೇ ಇಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಇದೆ. ಹೀಗಾಗಿ ಸ್ಥಳೀಯವಾಗಿ ಈ ಸಮಸ್ಯೆಯನ್ನು ಅರಿತು ಇದರ ಪರಿಹಾರಕ್ಕೆ ಇಲ್ಲಿರುವ ಐಐಟಿ ಸಿವಿಲ್ ಎಂಜಿನಿಯರ್‌ಗಳ ಸಲಹೆ ಪಡೆಯುವ ಜತೆಗೆ ಪ್ರತಿ ವರ್ಷ ಬರುವ ಟ್ರಾಫಿಕ್ ಫಂಡ್ ಸದ್ಬಳಕೆ ಮಾಡಿಕೊಂಡು ಹಂತ-ಹಂತವಾಗಿ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು ಎಂದರು.
ರೌಡಿಶೀಟರ್, ಪುಡಿರೌಡಿಗಳ ಹಾವಳಿ ನಿಯಂತ್ರಿಸಲು ಗೂಂಡಾ, ಬಾಂಡ್, ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಆ ಮೂಲಕ ಅಪರಾಧ ಕೃತ್ಯ ತಡೆಗೆ ಕ್ರಮವಹಿಸಲಾಗುವುದು. ಸದ್ಯ ಸಿಬ್ಬಂದಿ ಕೊರತೆ ಇದೆಯಾದರೂ, ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳ ಸಮರ್ಪಕ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ಕಮಿಷನರ್ ತಿಳಿಸಿದರು.
ಅವಳಿನಗರದಲ್ಲಿನ ಸ್ಟ್ಯಾಬಿಂಗ್(ಚಾಕು ಇರಿತ) ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಆ್ಯಂಟಿ ಸ್ಟ್ಯಾಬ್ ಸ್ಕ್ವಾಡ್‌ನ್ನು ರಚಿಸಲಾಗುವುದು. ಶಸ್ತ್ರಾಸ್ತ್ರ ಕಾಯ್ದೆ ಅನುಸಾರ ಕ್ರಮವಹಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ನಿರ್ಗಮಿತ ಕಮಿಷನರ್ ಶಶಿಕುಮಾರ ಅವರು ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಡಿಸಿಪಿ ಶ್ರುತಿ ಸೇರಿದಂತೆ ಹಲವರಿದ್ದರು.