ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆವರಣ ಭಾನುವಾರ ಅಕ್ಷರಶಃ ಲಕ್ಷಾಂತರ ಜನರಿಂದ ತುಂಬಿ ತುಳುಕುತ್ತಿತ್ತು. ವಾರಾಂತ್ಯದ ದಿನವಾಗಿರುವ ಕಾರಣ ರೈತರು, ಕೃಷಿ ಆಸಕ್ತರು ಸೇರಿದಂತೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಮೇಳಕ್ಕೆ ಬಂದ ಹಿನ್ನೆಲೆಯಲ್ಲಿ ಮೇಳ ಕಿಕ್ಕಿರಿದು ತುಂಬಿತ್ತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೂಸರ್, ಕಾರು, ಬಸ್ಸು ಹಾಗೂ ಇತರೆ ವಾಹನಗಳ ಮೂಲಕ ಜನರ ಆಗಮನದಿಂದ ಕೃಷಿ ವಿವಿ ಹಾಗೂ ಸುತ್ತಲು ವ್ಯವಸ್ಥೆ ಮಾಡಿದ್ದ ವಾಹನ ಪಾರ್ಕಿಂಗ್ ಭರ್ತಿಯಾದ ಕಾರಣ, ಪಶ್ಚಿಮದ ನರೇಂದ್ರ ಕ್ರಾಸ್, ಬೈಪಾಸ್, ಪೂರ್ವದ ಹೊಸ ಬಸ್ ನಿಲ್ದಾಣ ಹಾಗೂ ಉತ್ತರದ ಎತ್ತಿನಗುಡ್ಡ ಹಾಗೂ ಸುತ್ತಲಿನ ನಾಲ್ಕೈದು ಕಿ.ಮೀ. ದೂರದಲ್ಲಿ ವಾಹನ ನಿಲ್ಲಿಸಿ ಜನರು ನಡೆದುಕೊಂಡು ಬಂದು ಮೇಳವನ್ನು ವಿಕ್ಷಿಸಿದ್ದು ಇತಿಹಾಸವೇ ಸರಿ.
ಬಿತ್ತನೆ ಬೀಜ ವಿತರಣೆ: ಮೊದಲ ದಿನ ₹21 ಲಕ್ಷ ಮೌಲ್ಯದ 230 ಕ್ವಿಂಟಾಲ್ ವಿವಿಧ ಹಿಂಗಾರು ಬೀಜಗಳನ್ನು ಖರೀದಿಸಿದರೆ, ಭಾನುವಾರ ₹45 ಲಕ್ಷ ಮೌಲ್ಯದ 510 ಕ್ವಿಂಟಾಲ್ ಬೀಜಗಳನ್ನು ಖರೀದಿಸಿದ್ದಾರೆ ಎಂದು ಕೃಷಿ ವಿವಿ ಮಾಹಿತಿ ನೀಡಿದೆ. ಹಿಂಗಾರು ಬೀಜಗಳ ಪೈಕಿ ಕುಸುಬೆ, ಅಲಸಂದಿ ಹಾಗೂ ಕಡಲೆ ಬೀಜಗಳನ್ನು ಹೆಚ್ಚು ರೈತರು ಖರೀದಿಸಿದರು.ಭಾನುವಾರ ನಡೆದ ಸಮಾರಂಭದಲ್ಲಿ ಬೀಜೋತ್ಪಾನೆಯಲ್ಲಿ ಸಾಧನೆಗೈದ ರೈತರಾದ ತಿರ್ಲಾಪೂರದ ಮಂಜುಳಾ ಕಾಮರೆಡ್ಡಿ, ನವಲೂರಿನ ಶಿವಪ್ಪ ಕಟ್ಟಿ, ಬ್ಯಾಹಟ್ಟಿಯ ಅಶೋಕ ಮತ್ತಿಹಳ್ಳಿ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ. ಪಿ.ಎಲ್. ಪಾಟೀಲ, ಕೃಷಿಯಲ್ಲಿ ರೈತರು ಸಶಕ್ತರಾಗಲು ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಅಗತ್ಯ. ಬೀಜವೆಂಬವುದು ಕೇವಲ ಒಂದು ಚಿಕ್ಕ ಕಣವಲ್ಲ; ಅದು ಕೃಷಿ ಭವಿಷ್ಯದ ಕನಸು ಮತ್ತು ರೈತರ ಬದುಕಿನ ಆಧಾರ. ರೈತರ ಇಳುವರಿ ಹೆಚ್ಚಿಸಿ, ಆದಾಯ ವೃದ್ದಿಸುವ ನಿಟ್ಟಿನಲ್ಲಿ 1990ರಲ್ಲಿ ಪ್ರಾರಂಭವಾದ ವಿವಿ ಬೀಜ ಘಟಕ ಸ್ಥಾಪಿಸಲಾಯಿತು ಎಂದರು.
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್. ವಿ. ಸುರೇಶ, ರಾಯಚೂರು ಕೃಷಿ ವಿವಿ ಕುಲಪತಿ ಡಾ. ಎಂ. ಹನುಮಂತಪ್ಪ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ತೋಟಗಾರಿಕಾ ವಿವಿ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ, ಮಂಡ್ಯ ಕೃಷಿ ಮತ್ತು ತೋಟಗಾರಿಕೆ ವಿವಿ ವಿಶೇಷ ಅಧಿಕಾರಿ ಡಾ. ಹರಿಣಿಕುಮಾರ ಕೆ, ಕಲಬುರ್ಗಿ ವಿವಿ ನೂತನ ಕುಲಪತಿ ಡಾ. ಎಸ್. ಉಡಿಕೇರಿ, ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ, ಡಾ. ಪಿ.ಎಂ. ಸಾಲಿಮಠ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಿದ್ದರು.