ನಿಸ್ವಾರ್ಥ ಮನೋಭಾವದಿಂದ ಹೆಮ್ಮರವಾದ ಸಂಘ: ಪೇಜಾವರ ಶ್ರೀ

KannadaprabhaNewsNetwork |  
Published : Jun 23, 2025, 11:47 PM IST
(ಫೋಟೊ23ಬಿಕೆಟಿ1, ಬವಿವ ಸಂಘದ ಮೈದಾನದಲ್ಲಿ ಜರುಗಿದ ಆರ್ಎಸ್ಎಸ್ ಸಾಂಘಿಕದಲ್ಲಿ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.) | Kannada Prabha

ಸಾರಾಂಶ

ಸ್ವಯಂ ಸೇವಕರಲ್ಲಿ ಬಿತ್ತುವ ನಿಸ್ವಾರ್ಥ ಮನೋಭಾವದ ಸಂಸ್ಕಾರದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸ್ವಯಂ ಸೇವಕರಲ್ಲಿ ಬಿತ್ತುವ ನಿಸ್ವಾರ್ಥ ಮನೋಭಾವದ ಸಂಸ್ಕಾರದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಬವಿವ ಸಂಘದ ಮೈದಾನದಲ್ಲಿ ನಡೆದ ಆರ್‌ಎಸ್ಎಸ್ ಸಾಂಘಿಕದಲ್ಲಿ ಪಾಲ್ಗೊಂಡು ಪ್ರವಚನ ನೀಡಿದ ಶ್ರೀಗಳು, ಎಲ್ಲೇ ಆಪತ್ತು ಸಂಭವಿಸಿದರೂ ರಕ್ಷಣಾ ಪಡೆಗಳ ಜೊತೆಗೆ ಹೆಗಲಾಗಿ ನಿಲ್ಲುವುದು ಆರ್‌ಎಸ್ಎಸ್‌ ಸ್ವಯಂ ಸೇವಕರು. ಸಂಘ ತನ್ನ ಸ್ವಯಂ ಸೇವಕರಲ್ಲಿ ದೇಶ ಮೊದಲು ನಂತರ ತಾನು ಎಂಬ ಮಹೋನ್ನತವಾದ ಸಂಸ್ಕಾರ ಬಿತ್ತುತ್ತದೆ. ಅವರಲ್ಲಿರುವ ನಿಸ್ವಾರ್ಥ ಮನೋಭಾವದಿಂದಲೇ ಸಂಘ ಶತಮಾನದ ಹೊಸ್ತಿಲಿಗೆ ಬಂದು ನಿಂತಿದೆ ಎಂದು ಬಣ್ಣಿಸಿದರು.

ಲಂಕೆ ಸಂಹಾರದ ನಂತರ ಲಕ್ಷ್ಮಣ ಅಲ್ಲಿನ ವಾತಾವರಣ ಕಂಡು ಅಲ್ಲಿಯೇ ಉಳಿಯುವ ಇಚ್ಛೆ ವ್ಯಕ್ತಪಡಿಸಿದಾಗ ಶ್ರೀರಾಮ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂದು ಹೇಳಿ, ಜನ್ಮಭೂಮಿಗಿಂತಲೂ ಮಿಗಿಲಾದ ಸ್ವರ್ಗ ಯಾವುದೂ ಇಲ್ಲ ಎಂಬ ಉಪದೇಶ ನೀಡಿದ್ದ. ಭಾರತೀಯ ಇತಿಹಾಸ ತ್ಯಾಗ, ಸಹಬಾಳ್ವೆ ಪ್ರತಿಪಾದಿಸಿದೆ. ಅದಕ್ಕಾಗಿಯೇ ದೇಶದ ಮೇಲೆ ಇಷ್ಟೆಲ್ಲ ದಾಳಿ ನಡೆದರೂ ಸನಾತನ ಧರ್ಮ ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ ಎಂದರು.

ಸಂಘದ ಗೀತೆ ಸ್ವಯಂ ಸೇವಕರಲ್ಲಿ ದೇಶ ಸೇವೆಯ ಕರೆ ನೀಡುತ್ತದೆ. ಸಂಘದ ಸ್ವಯಂ ಸೇವಕರು ಹೆಸರು, ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ. ನಿಸ್ವಾರ್ಥ ಸೇವೆಯೇ ಪರಮ ಗುರಿ ಎಂದು ಭಾವಿಸಿ ಸಮಾಜ ಕಾರ್ಯಕ್ಕೆ ಕಂಕಣ ಬದ್ಧರಾಗಿರುತ್ತಾರೆ. ಸಂಘ ಶತಮಾನೋತ್ಸವ ಆಚರಣೆಯಲ್ಲಿರುವುದು ಹೆಮ್ಮೆಯ ವಿಷಯ ಎಂದರು. ಜಿಲ್ಲಾ ಸಂಘ ಚಾಲಕ ಚಂದ್ರಶೇಖರ ದೊಡ್ಡಮನಿ, ಅರುಣ ದೇಸಾಯಿ ಮತ್ತಿತರರು ಇದ್ದರು.

ಉತ್ತರಾದಿಮಠದಲ್ಲಿ ಸಂಸ್ಥಾನ ಪೂಜೆ:

ಏಕಾದಶಿ ದಿನವಾರ ಭಾನುವಾರ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ನವನಗರದ ಬೃಂದಾವನ ಸೆಕ್ಟರ್‌ ನಲ್ಲಿರುವ ಉತ್ತರಾದಿ ಮಠದಲ್ಲಿ ಮಧ್ವಕರಾಚರ್ತ ಶ್ರೀರಾಮವಿಠ್ಠಲ ಪೂಜೆ ನೆರವೇರಿಸಿದರು. ಶ್ರೀಗಳ ಪೂಜೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ನಿಶ್ಚಕ್ರ ಏಕಾದಶಿ ನೆರವೇರಿಸಿದ ವಿಪ್ರ ಸಮಾಜದ ಅನೇಕರು ಏಕಾದಶಿ ಪರ್ವ ದಿನದಂದು ರಾಮವಿಠ್ಠಲ ಪೂಜೆಗೆ ಸಾಕ್ಷಿಯಾಗಿ ಪುನಿತರಾದರು. ಸಂಜೆ ವಿದ್ಯಾಗಿರಿ ವಿಪ್ರ ಮಠದಲ್ಲಿ ಜರುಗಿದ ಸಮಾರಂಭದಲ್ಲಿ ಪಂ.ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ ಅವರು ಪ್ರವಚನ ನೀಡಿದರು.

ಗಮನಸೆಳೆದ ಶತಕಂಠ ಲಕ್ಷ್ಮೀಶೋಭಾನೆ:ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ವರ್ಧಂತಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ 8 ದಿನಗಳ ಕಾರ್ಯಕ್ರಮದ ಭಾಗವಾಗಿ ಭಾನುವಾರ ಸಂಜೆ ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ರಾಯರಮಠದಲ್ಲಿ ಮಹಿಳೆಯರಿಂದ ಶತಕಂಠ ಶ್ರೀಲಕ್ಷ್ಮೀಶೋಭಾನೆ ಜರುಗಿತು. ಏಕಕಾಲಕ್ಕೆ ಮಹಿಳೆಯರು ಶೋಭಾನೆ ಹಾಡಿ ಗಮನ ಸೆಳೆದರು. ಬಾಗಲಕೋಟೆ, ನವನಗರ, ವಿದ್ಯಾಗಿರಿ ಸೇರಿದಂತೆ ಸುತ್ತಮುತ್ತಲಿನ ಊರುಗಳ 11ಕ್ಕೂ ಅಧಿಕ ಭಜನಾ ಮಂಡಳಿ ಸದಸ್ಯೆಯರು ಪಾಲ್ಗೊಂಡಿದ್ದರು. ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿದವು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ