-ಘೋಷಣೆಯಾದ ನೀರಾವರಿ ಯೋಜನೆಗಳಿಗೆ ಬೇಕಿದೆ ಅನುದಾನ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.೧೬ರಂದು ಮಂಡಿಸಲಿರುವ ಈ ಬಾರಿಯ ಬಜೆಟ್ ಮೇಲೆ ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿದೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ನೀರಾವರಿ ಯೋಜನೆ, ಕೈಗಾರಿಕೆ ಸ್ಥಾಪನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಯಾವ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ, ಎಷ್ಟು ಅನುದಾನ ನೀಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.
ಜಿಲ್ಲೆಯಾಗಿ ೨೬ ವರ್ಷಗಳೇ ಗತಿಸಿದರೂ ಇನ್ನೂ ಜಿಲ್ಲಾ ಕೇಂದ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಮೂಲಸೌಲಭ್ಯಗಳ ಕೊರತೆ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಮಾಜಿಕ, ಶೈಕ್ಷಣಿಕ ಸುಧಾರಣೆ ಅಷ್ಟಕ್ಕಷ್ಟೇ ಎಂಬಂತಾಗಿದೆ. ಜಿಲ್ಲೆಯ ಪ್ರಮುಖ ಬೇಡಿಕೆಗಳು ಪ್ರತಿ ಬಜೆಟ್‌ನಲ್ಲಿ ನಿರೀಕ್ಷೆಗಳಾಗಿಯೇ ಮುಂದುವರಿಯುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಈ ಬಾರಿಯಾದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಿ, ಅದಕ್ಕೆ ಅಗತ್ಯವಿರುವ ಅನುದಾನವನ್ನು ಘೋಷಿಸಬಹುದು ಎಂಬ ನಿರೀಕ್ಷೆಯಿದೆ. ಜಿಲ್ಲೆಯ ೮ ತಾಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಯೋಜನೆಗಳು, ಅದಕ್ಕೆ ಅನುದಾನ ಅಗತ್ಯವಿದೆ. ಜಿಲ್ಲೆಯ ಶಾಸಕರು ಇಡುವ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ನೀಡುವ ನಿರೀಕ್ಷೆಯಿದೆ.
ಜಿಲ್ಲೆಯ ಬಹು ವರ್ಷಗಳ ಬೇಡಿಕೆಗಳಲ್ಲಿ ಪ್ರಮುಖವಾದವುಗಳನ್ನು ಈ ಹಿಂದಿನ ಬಿಜೆಪಿ ಸರ್ಕಾರ ಈಡೇರಿಸಿದೆ. ಮೆಡಿಕಲ್ ಕಾಲೇಜು, ಪ್ರತ್ಯೇಕ ಹಾಲು ಒಕ್ಕೂಟವನ್ನು ಹಿಂದಿನ ಸರ್ಕಾರ ಅನುಷ್ಠಾನ ಘೋಷಿಸಿ ಅಗತ್ಯ ಅನುದಾನ ನೀಡಿದ್ದರಿಂದ ಅವು ಈಗಾಗಲೇ ಕಾರ್ಯಾರಂಭ ಮಾಡುತ್ತಿವೆ.
ಕೃಷಿ ಪೂರಕ ಕೈಗಾರಿಕೆ:
ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಿನ್ನೆಲೆ ರೈತರು ಬೆಳೆದಂತ ಉತ್ಪನ್ನಗಳಿಗೆ ಪೂರಕವಾಗುವಂತಹ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬುದು ರೈತ ಮುಖಂಡರ ಒತ್ತಾಯವಾಗಿದೆ. ಕೃಷಿ ಪೂರಕ ಕೈಗಾರಿಕೆ ಸ್ಥಾಪಿತಗೊಂಡರೆ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ, ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಸಿಗಲಿದೆ. ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತೆ ಬಹೃತ್ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಿ ಕೈಗಾರಿಕಾ ಹಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಿದೆ. ಹಾವೇರಿ ಸಮೀಪದ ಕೋಳೂರು, ಗಣಜೂರು ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಬೇಕು ಎಂಬುದು ಹಳೆಯ ಬೇಡಿಕೆಯಾಗಿದೆ.
ಜಿಲ್ಲಾ ಕೇಂದ್ರವಾದ ಹಾವೇರಿ ನಗರಕ್ಕೆ ಇದುವರೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ೨೦೧೬ರಲ್ಲಿ ಆರಂಭವಾಗಿರುವ ೨೪-೭ನೀರು ಪೂರೈಸುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೇ ನಗರದಲ್ಲಿ ಆರಂಭಗೊಂಡಿದ್ದ ಯುಜಿಡಿ ಕಾಮಗಾರಿ ಹಲವು ವರ್ಷಗಳು ಕಳೆದಿದ್ದರೂ, ಕಾಮಗಾರಿ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿದೆ. ಈ ಯೋಜನೆಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುವುದು ಸೇರಿದಂತೆ ಹಾವೇರಿ ಜಿಲ್ಲಾ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕಿದೆ.
ಹಾವೇರಿ ಸಮೀಪದ ಕೋಳೂರು-ಗಣಜೂರಿನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಹಿಂದಿನ ಸರ್ಕಾರ 400 ಎಕರೆ ಭೂಸ್ವಾಧೀನ ಮಾಡಿತ್ತು. ಆದರೆ, ಮುಂದಿನ ಪ್ರಕ್ರಿಯೆ ಸ್ಥಗಿತಗೊಂಡಿತು. ಇರುವ ಅಡೆತಡೆ ನಿವಾರಿಸಿ ಕೈಗಾರಿಕೆ ಸ್ಥಾಪನೆಯಾದರೆ, ಸಣ್ಣ ಕೈಗಾರಿಕೆಗಳಿಗೂ ಪ್ರೋತ್ಸಾಹ ಸಿಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಕಾರಿಡಾರ್ ಆರಂಭಿಸುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ.