ಮಂಗಳೂರಿನ ದಿ. ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ನೂತನ ಯೋಜನೆ ವಾಗ್ದೇವಿ ಟವರ್ಸ್‌ ಇದರ ಶಂಕುಸ್ಥಾಪನೆ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ ಅವರ ನೇತೃತ್ವದಲ್ಲಿ ಶನಿವಾರ ನೆರವೇರಿತು.

ಮಂಗಳೂರು: ೮೭ ವರ್ಷಗಳಿಂದ ಜಿ.ಎಸ್.ಬಿ ಸಮಾಜದ ಸೇವೆಯಲ್ಲಿ ತೊಡಗಿರುವ ಮಂಗಳೂರಿನ ದಿ. ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ನೂತನ ಯೋಜನೆ ವಾಗ್ದೇವಿ ಟವರ್ಸ್‌ ಇದರ ಶಂಕುಸ್ಥಾಪನೆ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ ಅವರ ನೇತೃತ್ವದಲ್ಲಿ ಶನಿವಾರ ನೆರವೇರಿತು.

ಬಳಿಕ ಮಾತನಾಡಿದ ಅವರು, ಸಮಾಜದ ಅಗತ್ಯತೆಯನ್ನು ಪರಿಗಣಿಸಿ ಸಂಘವು ಕಡಿಮೆ ಆದಾಯದ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡುವುದು, ವಿದ್ಯಾರ್ಥಿಗಳಿಗೆ ಊಚಿತ ಪುಸ್ತಕ ಮತ್ತು ಸಮವಸ್ತ್ರ ಹಂಚುವುದು, ಹಿರಿಯ ನಾಗರಿಕರಿಗೆ ಊಚಿತ ಔಷಧ ವಿತರಣೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಆದರೆ ಇಂದು ಸಮಾಜದ ಅವಶ್ಯಕತೆ ಬದಲಾಗಿದೆ. ಐಟಿ ಉದ್ಯಮದ ಭರಕ್ಕೆ ಯುವಪೀಳಿಗೆ ಪರ ಊರುಗಳಿಗೆ ಸ್ಥಳಾಂತರಗೊಳ್ಳುತ್ತಿದ್ದು, ನಗರದಲ್ಲಿ ಕೇವಲ ಹಿರಿಯ ನಾಗರಿಕರು ಉಳಕೊಳ್ಳುವಂತಾಗಿದೆ. ಇದನ್ನು ಪರಿಗಣಿಸಿ ನಾವು ಕಟ್ಟುತ್ತಿರುವ ೬೦,೦೦೦ ಚದರ ಅಡಿಯ ಕಟ್ಟಡದಲ್ಲಿ ೨೦,೦೦೦ ಚದರ ಅಡಿಯನ್ನು ಐಟಿ ಹಬ್ ಹಾಗೂ ಸಾಫ್ಟ್‌ವೇರ್‌ ಸೆಂಟರಿಗೆ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ವಾಗ್ದೇವಿ ಟವರ್ಸ್‌ ಇದರ ವಾಸ್ತಶಿಲ್ಪಿ ಪೈಲಾಂಡ್ಸ್ ಅಸೋಸಿಯೇಟ್‌ನ ವೆಂಕಟೇಶ ಪೈ ಅವರು ನೂತನ ಕಟ್ಟಡದ ಬಗ್ಗೆ ಮಾಹಿತಿ ನೀಡಿದರು.

ಉದ್ಯಮಿಗಳಾದ ಡಾ. ಪಿ. ದಯಾನಂದ ಪೈ ಬೆಂಗಳೂರು, ಟಿ. ವಿ. ಮೋಹನದಾಸ ಪೈ ಬೆಂಗಳೂರು, ಅಶೋಕ್ ಪೈ ಮಣಿಪಾಲ ಹಾಗೂ ಸಿ. ಡಿ. ಕಾಮತ್ ಮಂಗಳೂರು ಇವರ ಸಂದೇಶಗಳನ್ನು ಓದಲಾಯಿತು.

ಬಳಿಕ ನಡೆದ ಸಂವಾದದಲ್ಲಿ ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯ ವಿಭಾಗದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್‌, ಮುಕುಂದ ಎಂ.ಜಿ.ಎಂ ರಿಯಾಲಿಟಿಯ ಗುರುದತ್ತ ಶೆಣೈ, ಡಾ. ಸಜ್ಜನ್ ಶೆಣೈ, ಆನಂದ ಜಿ. ಪೈ, ವತಿಕಾ ಪೈ ಮತ್ತು ಉದ್ಯಮಿ ಅಜಿತ್‌ ಕಾಮತ್ ಅವರು ಮಂಗಳೂರು ಪ್ರದೇಶದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ಕುಂಬ್ಳೆ ನರಸಿಂಹ ಪ್ರಭು ಸಮನ್ವಯಕಾರರಾಗಿದ್ದರು. ಸಭಾ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಮಂಡಳಿಯ ಎಚ್. ವಿಜಯಚಂದ್ರ ಕಾಮತ್, ಜಿ. ಮಾಧವರಾಯ ಪ್ರಭು, ಯು. ಅರವಿಂದ ಆಚಾರ್ಯ, ಎಂ. ಆರ್. ಕಾಮತ್, ಜಿ. ವಿಶ್ವನಾಥ ಭಟ್, ಶಾಂಭವಿ ಪ್ರಭು ಇದ್ದರು. ಸುಚಿತ್ರಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಮೇಶ ಎ. ಪೈ ವಂದಿಸಿದರು. ಎಂ. ಅಜಿತ್ ಕಾಮತ್, ಜಿ. ಗೋವಿಂದರಾಯ್ ಪ್ರಭು, ಗೀತಾ ಪ್ರಭು, ಪಿ. ದಿನಕರ ಕಾಮತ್, ವಿದ್ಯಾ ಪೈ, ವೆಂಕಟೇಶ ಬಾಳಿಗಾ ಹಾಗೂ ಪ್ರಕಾಶ ಭಕ್ತ ಸಹಕರಿಸಿದರು.