ಯಾವುದೇ ಫಲಾಪೇಕ್ಷೆ ಇಲ್ಲದೆ ದಶಕಗಳಿಂದ ಕೆರೂರ ಉತ್ಸವ ಆಚರಿಸಿ ಕನ್ನಡಮ್ಮನ ಸೇವೆ ಮಾಡುತ್ತಿರುವ ಶಿರೂರ ಪ್ರತಿಷ್ಠಾನ ಕಾರ್ಯ ಶ್ಲಾಘನೀಯ. ಬಾದಾಮಿಗೆ ಬನ್ನಿ, ನಾವೆಲ್ಲ ಸಹಾಯ ಸಹಕಾರ ಕೊಡುತ್ತೇವೆಂದು ಕೆರೂರ ಉತ್ಸವ ರೂವಾರಿ ವೆಂಕಟೇಶಮೂರ್ತಿ ಶಿರೂರ ತಂಡಕ್ಕೆ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಆಹ್ವಾನ ಕೊಟ್ಟರು.

ಕನ್ನಡಪ್ರಭ ವಾರ್ತೆ ಕೆರೂರ

ಯಾವುದೇ ಫಲಾಪೇಕ್ಷೆ ಇಲ್ಲದೆ ದಶಕಗಳಿಂದ ಕೆರೂರ ಉತ್ಸವ ಆಚರಿಸಿ ಕನ್ನಡಮ್ಮನ ಸೇವೆ ಮಾಡುತ್ತಿರುವ ಶಿರೂರ ಪ್ರತಿಷ್ಠಾನ ಕಾರ್ಯ ಶ್ಲಾಘನೀಯ. ಬಾದಾಮಿಗೆ ಬನ್ನಿ, ನಾವೆಲ್ಲ ಸಹಾಯ ಸಹಕಾರ ಕೊಡುತ್ತೇವೆಂದು ಕೆರೂರ ಉತ್ಸವ ರೂವಾರಿ ವೆಂಕಟೇಶಮೂರ್ತಿ ಶಿರೂರ ತಂಡಕ್ಕೆ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಆಹ್ವಾನ ಕೊಟ್ಟರು.ರಾತ್ರಿ ಪಟ್ಟಣದ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆರೂರ ಉತ್ಸವ ಚಾಲನಾ ಸಮಾರಂಭದಲ್ಲಿ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, 500 ಕಿ.ಮೀ ದೂರದ ಬೆಂಗಳೂರಿನಲ್ಲಿ ವಾಸವಾಗಿರುವ ವೆಂಕಟೇಶಮೂರ್ತಿ ಹೆತ್ತವರ ನೆನಪು ಹುಟ್ಟೂರಿನ ಮಮತೆಯಿಂದ ಗೆಳೆಯರ ಬಳಗ ಕಟ್ಟಿಕೊಂಡು ಬಂಧು-ಬಾಂಧವರನ್ನು ಸೇರಿಸಿ ಗಣ್ಯರನ್ನು ಕರೆದು ಕನ್ನಡ ರಾಜ್ಯೋತ್ಸವ ನೆನಪಿನಲ್ಲಿ ನಾಡಿನ ಹೆಸರಾಂತ ಕಲಾವಿದರೊಂದಿಗೆ ಬೆಂಗಳೂರಿನಿಂದ ಇಲ್ಲಿಗೆ ಬಂದು ಕೆರೂರ ಉತ್ಸವ ಸ್ನೇಹ ಸಮ್ಮಿಲನ ನಡೆಸುತ್ತಾ ಬಂದಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಮಹಾಂತೇಶ ಈಳಗೇರ ಮಾತನಾಡಿ, ಕನ್ನಡದ ಮನಸ್ಸುಗಳನ್ನು ದೇಶ-ವಿದೇಶಗಳಲ್ಲಿ ಒಂದೆಡೆ ಸೇರಿಸಿ ತಮ್ಮ ಗಾಯನ ಪ್ರಸ್ತುತಿಯಿಂದ ಕನ್ನಡ ಶ್ರೀಮಂತಗೊಳಿಸುತ್ತಿರುವ ಮೂರ್ತಿ ನಮ್ಮ ಮನೆಯ ಕೀರ್ತಿ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ವೆಂಕಟೇಶಮೂರ್ತಿ ಶಿರೂರ ಮಾತನಾಡಿ, ತಾವು ನಡೆದು ಬಂದ ದಾರಿ ಕುಟುಂಬದ ಪ್ರೋತ್ಸಾಹ. ಸಂಗೀತ ಸಾಧನೆಗೆ ಸಹಕರಿಸಿದ ಗುರುಗಳು, ಬಂಧು-ಬಳಗ ಸೇರಿದಂತೆ ಅನೇಕರ ಸಹಾಯ ಸಹಕಾರ ನನಗೆ ಪ್ರೇರಣೆಯಾಯಿತು ಎಂದರು.

ಪಪಂ ಮಾಜಿ ಸದಸ್ಯ ಮಹ್ಮದ್‌ ರಫೀಕ್‌ ಪೀರಖಾನ ಪರಿಚಯಿಸಿ ಸ್ವಾಗತಿಸಿದರು. ಇದೇ ವೇಳೆ 75 ವರ್ಷದ ನಂದಾ ನಾಡಗೇರ ಅವರನ್ನು ಸನ್ಮಾನಿಸಲಾಯಿತು.

ಪ್ರೇಕ್ಷಕರನ್ನು ರಂಜಿಸಿದ ವೆಂಕಟೇಶಮೂರ್ತಿ ತಂಡ: ಖ್ಯಾತ ಚಲನಚಿತ್ರ ನಟ ದಿ.ವಿಷ್ಣುವರ್ಧನ್‌ರನ್ನು ನೆನಪಿಸುವ ಜ್ಯೂನಿಯರ್‌ ವಿಷ್ಣುವರ್ಧನ್‌ರ ಡೈಲಾಗ್‌, ನಟನೆ, ಸುರೇಖಾ ಹೆಗಡೆ, ರೇಶ್ಮಾ, ಮಂಜುಳಾ ನೇಸರಗಿ, ಇಮಾಮ್‌ ನದಾಫ್‌ ಸೇರಿದಂತೆ ಅನೇಕ ಕಲಾವಿದರಿಂದ ರಸಮಂಜರಿ, ಜಾನಪದ ಜಾಣ ಶಬ್ಬೀರ್‌ ಡಾಂಗೆ ಅವರ ಚುಟುಕು ಸಾಹಿತ್ಯ ಜಾನಪದ ಗೀತೆ, ನಡು ನಡುವೆ ಹಾಸ್ಯದ ಸುರಿಮಳೆ ಜೊತೆಗೆ ವೆಂಕಟೇಶಮೂರ್ತಿ ಅವರ ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರು ಚಪ್ಪಾಳೆ ಕೇ ಕೇ ಹಾಕುವುದರೊಂದಿಗೆ ರಂಜಿಸಿದರು.

ಪಟ್ಟಣದಲ್ಲಿ ಗಂಧರ್ವ ಲೋಕವೇ ಸೃಷ್ಟಿಯಾಗಿತ್ತು. ಪಿಕಾರ್ಡ್‌ ಬ್ಯಾಂಕ ಅಧ್ಯಕ್ಷ ಮಹಾಂತೇಶ ಮಮದಾಪೂರ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಹನುಮಂತ ಮಾವಿನಮರದ, ವಿ.ವ. ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ, ಜಿಪಂ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ, ಶಿಕ್ಷಕರಾದ ಡಿ.ಪಿ. ಅಮಲಝರಿ, ಆರ್‌.ಆರ್‌. ಶೆಟ್ಟರ, ಚಲನಚಿತ್ರ ನಿರ್ಮಾಪಕ ದಾವಲಸಾಬ ಹುಣಸೀಮರದ, ಗಣ್ಯರಾದ ಚನ್ನಮಲ್ಲಪ್ಪ ಘಟ್ಟದ, ಲಕ್ಷ್ಮಣ ಕಕರಡ್ಡಿ, ಭಿಮಸೇನ ದೇಸಾಯಿ, ಡಾ.ಶಂಕರ ಕಲಾಲ, ವಿಜಯಕುಮಾರ ಐಹೊಳ್ಳಿ ಸಾಕ್ಷಿಯಾದರು. ಪ್ರಾಣೇಶಾಚಾರ್ಯ ಕೆರೂರ ಸಾನ್ನಿಧ್ಯ ವಹಿಸಿದ್ದರು. ಗುಂಡಣ್ಣ ಬೋರಣ್ಣವರ ನಿರೂಪಿಸಿದರು.