ಸರಳ ವಿವಾಹದಿಂದ ಸಂಸಾರ ಆನಂದಮಯ

KannadaprabhaNewsNetwork |  
Published : Oct 17, 2024, 12:52 AM IST
ಸಮ್ಮೇಳನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮದುವೆಗೆ ಲಕ್ಷಾಂತರ ಹಣ ದುಂದುವೆಚ್ಚ ಮಾಡಿ ಜೀವನವನ್ನೇ ಸಾಲ ತೀರಿಸಲು ಕಳೆಯುವ ಬದಲು ಸರಳವಾಗಿ ವಿವಾಹ ಮಾಡಿಕೊಂಡರೆ ಸಂಸಾರ ಆನಂದಮಯವಾಗಲಿದೆ. ಅಲ್ಲದೇ, ಮಠಾಧೀಶರ ಹಾಗೂ ಗಣ್ಯರ ಶುಭ ಆಶೀರ್ವಾದ ಲಭಿಸುತ್ತದೆ ಎಂದು ಯರಝರಿಯ ಯಲ್ಲಾಲಿಂಗೇಶ್ವರ ಮಠದ ಶ್ರೀ ಮಲ್ಲಾಲಿಂಗಪ್ರಭು ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮದುವೆಗೆ ಲಕ್ಷಾಂತರ ಹಣ ದುಂದುವೆಚ್ಚ ಮಾಡಿ ಜೀವನವನ್ನೇ ಸಾಲ ತೀರಿಸಲು ಕಳೆಯುವ ಬದಲು ಸರಳವಾಗಿ ವಿವಾಹ ಮಾಡಿಕೊಂಡರೆ ಸಂಸಾರ ಆನಂದಮಯವಾಗಲಿದೆ. ಅಲ್ಲದೇ, ಮಠಾಧೀಶರ ಹಾಗೂ ಗಣ್ಯರ ಶುಭ ಆಶೀರ್ವಾದ ಲಭಿಸುತ್ತದೆ ಎಂದು ಯರಝರಿಯ ಯಲ್ಲಾಲಿಂಗೇಶ್ವರ ಮಠದ ಶ್ರೀ ಮಲ್ಲಾಲಿಂಗಪ್ರಭು ಶ್ರೀಗಳು ಹೇಳಿದರು.

ತಾಲೂಕಿನ ಯರಝರಿ ಗ್ರಾಮದಲ್ಲಿ ನವರಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿ ಅವರು ಮಾತನಾಡಿದರು. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟವಾಗಿದೆ. ಇದಕ್ಕಾಗಿ ಆಡಂಭರದ ಹಾಗೂ ವೈಭವೀಕರಿಸುವ ಮತ್ತು ಅವರಿಗಿಂತ ಅದ್ಧೂರಿ ಮಾಡಬೇಕೆನ್ನುವ ಮನೋಭಾವದಿಂದ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಮಾಡುವುದು ಆದರ್ಶ. ಇದು ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವುದರ ಜೊತೆಗೆ ತಮ್ಮ ಮಕ್ಕಳಿಗೆ ದೇಶದ ಸಂಸ್ಕಾರ, ಧರ್ಮ, ಪರಂಪರೆ, ಶರಣರ ಸಂತರ ಬಗ್ಗೆ ತಿಳಿ ಹೇಳುವ ಮೂಲಕ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದರು.ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರು ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ. ಇಂದಿನ ಯುವಕರು ಆದರ್ಶರಾಗಬೇಕಾದರೆ ಸರ್ವಧರ್ಮ ಸಾಮೂಹಿಕ ಮದುವೆಗಳಲ್ಲಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಬೇಕು. ಈ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ. ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಕಿವಿಮಾತು ಹೇಳಿದರು.

ಈ ವೇಳೆ ಗಣ್ಯರಾದ ಡಾ.ವಿಶ್ವನಾಥ ಮಠ ಮಾತನಾಡಿ, ಯಲ್ಲಾಲಿಂಗೇಶ್ವರ ಮಠದ ಶ್ರೀ ಮಲ್ಲಾಲಿಂಗಪ್ರಭು ಮಹಾಸ್ವಾಮಿಗಳು ಪ್ರತಿವರ್ಷವೂ ನವರಾತ್ರೋತ್ಸವದ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ನಡೆಸುವ ಮೂಲಕ ಯರಝರಿ ಗ್ರಾಮವೂ ಅತ್ಯಂತ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತಿದೆ. ಮಠದ ಸಂಸ್ಕಾರ ಪರಂಪರೆ ಉಳಿಸಿ ಬೆಳೆಸಿದಾಗ ಮಾತ್ರ ಮುಂಬರುವ ಯುವ ಪೀಳಿಗೆಗಳಿಗೆ ಆದರ್ಶವಾಗಲಿದೆ. ಇದರಿಂದ ಗುರು ಹಿರಿಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ನಾವು ಗ್ರಾಮೀಣ ಸಂಸ್ಕೃತಿ ಎತ್ತಿ ಹಿಡಿಯುವ ಮೂಲಕ ಹಳ್ಳಿ ಹಬ್ಬ ಹರಿದಿನಗಳನ್ನು ಸಂತಸದಿಂದ ಆಚರಿಸುವುದರೊಂದಿಗೆ ಗೌರವ ಸಲ್ಲಿಸೋಣ ಮತ್ತು ಸ್ನೇಹದ ಬೆಸುಗೆ ಬೆಸೆಯೋಣ ಎಂದು ಹೇಳಿದರು.

ಆರ್‌ಟಿಒ ಐ.ಬಿ ಮುತ್ತತ್ತಿ, ಡಾ.ಬಿ.ಎಚ್.ಚಿಮ್ಮನಕಟ್ಟಿ, ಪಾಂಡುರಂಗ ಪೂಜಾರಿ, ಮುತ್ತಣ್ಣ ಹುಗ್ಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಗುರಿಕಾರ, ಶಿವಬಸಪ್ಪ ಮಾಸ್ತರ, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ, ಶ್ರೀಶೈಲ ಹಡಲಗೇರಿ, ಶಿವಪ್ಪ ಚಲಮಿ, ಬಿ.ಎಸ್.ಬಜೇಣ್ಣವರ, ಮಲ್ಲು ಅಪರಾಧಿ, ಅಶೋಕ ಚಳಮರದ, ಮಲಕೇಂದ್ರಾಯಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಪಟ್ಟಣದ ನಿರೂಪಿಸಿದರು, ಶಾಂತು ಪ್ರಿಯಾ ಕೋಡೇಕಲ್ಲ ಹಾಗೂ ಚೈತ್ರಾ ಡಂಬಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು,

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌