ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ

KannadaprabhaNewsNetwork |  
Published : Jun 30, 2024, 12:51 AM IST
ಜನ ಸ್ಮಪಂದನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಪರಿಶೀಲಿಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಜಿಲ್ಲಾಡಳಿತದಿಂದ ನಡೆಯಲಿದೆ. ಸಾರ್ವಜನಿಕರು ಜನಸ್ಪಂದನಾ ಸಭೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಪರಿಶೀಲಿಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಜಿಲ್ಲಾಡಳಿತದಿಂದ ನಡೆಯಲಿದೆ. ಸಾರ್ವಜನಿಕರು ಜನಸ್ಪಂದನಾ ಸಭೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ ಕರೆ ನೀಡಿದರು.

ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಮದುರ್ಗ ತಾಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಅಹವಾಲು ಹೇಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ತಾಲೂಕು ಹಂತದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜನಸ್ಪಂದನ ಕಾರ್ಯಕ್ರಮ ಹೀಗೆ ಮುಂದುವರೆಯಲಿದೆ. ತಾಲೂಕ ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಗ್ರಾಮೀಣ ಜನರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬೆಳಗಾವಿ ರಸ್ತೆಯಲ್ಲಿರುವ ಎಂಎಸ್‌ಐಎಲ್ ಮದ್ಯದ ಅಂಗಡಿಯನ್ನು ಸ್ಥಳಾಂತರಿಸುವ ಬಗ್ಗೆ ಒಂದು ಕೋಮಿನ ಜನರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಕಂದಾಯ, ಪುರಸಭೆ, ಗ್ರಾಪಂ ಮತ್ತು ಅರಣ್ಯ ಇಲಾಖೆ ಸಮಸ್ಯೆಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾದವು. ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.

ಜನಸ್ಪಂದನಾ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಪ್ರಭಾರಿ ಡಿಎಸ್‌ಪಿ ರವಿ ನಾಯ್ಕ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಧ್ವನಿ ವರ್ಧಕದ ಸಮಸ್ಯೆ:

ಅಹವಾಲು ಸಲ್ಲಿಸಲು ಬಂದವರಲ್ಲಿ ಕೆಲವರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ ಮತ್ತು ಸಮಸ್ಯೆ ಹೇಳುವಾಗ ಕೆಲವರು ಅತಿಯಾಗಿ ವಿಷಯ ಮಂಡನೆ ಮಾಡುತ್ತಾರೆ. ಇದನ್ನು ತಡೆಯಲು ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿತ್ತು. ಆದರ, ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ಸಾರ್ವಜನಿಕರಿಗೆ ಬಳಸಲು ಅವಕಾಶವಿರಲಿಲ್ಲ. ಪರಿಣಾಮ ಯಾರು ಏನು ಸಮಸ್ಯೆ ಹೇಳುತ್ತಿದ್ದಾರೆ ಎನ್ನುವುದು ವರದಿಗೆ ತೆರಳಿದ್ದ ಮಾಧ್ಯಮದವರಿಗೆ ಮತ್ತು ಇತರರಿಗೆ ತಿಳಿಯಲೇ ಇಲ್ಲ.

-----------------------------------

ಕೋಟ್‌

ರಾಮದುರ್ಗದಲ್ಲಿ ಸಲ್ಲಿಕೆಯಾದ ನೂರಾರು ಅಹವಾಲುಗಳಲ್ಲಿ ಬಹುತೇಕ ಸಹೋದರರ, ಬಂಧುಗಳ ಹಾಗೂ ನೆರೆಹೊರೆಯವರೊಂದಿಗೆ ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳಾಗಿವೆ. ಅವುಗಳನ್ನು ಪರಸ್ಪರ ಒಪ್ಪಂದದ ಮೂಲಕ ಪರಿಹಾರ ಕಲ್ಪಿಸಲಾಗುವುದು ನಂತರ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು.

ನಿತೇಶ ಪಾಟೀಲ, ಜಿಲ್ಲಾಧಿಕಾರಿಗಳು.

------------------------------------------------

ಬಾಕ್ಸ್‌

ಪಟ್ಟಣದಲ್ಲಿ ಡಿಸಿ,ಎಸ್ಪಿ ಹೆಲ್ಮೆಟ್‌ ಜಾಗೃತಿ

ರಾಮದುರ್ಗ: ಬೈಕ್‌ ಸವಾರರಲ್ಲಿ ಹೆಲ್ಮೆಟ್‌ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಡಾ.ಭೀಮಾಶಂಕರ ಗುಳೇದ ನೇತೃತ್ವದ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ವತಃ ಹೆಲ್ಮೆಟ್ ಧರಿಸಿ ಪಟ್ಟಣದಲ್ಲಿ ಬೈಕ್ ರ್‍ಯಾಲಿ ನಡೆಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಿಸಿ ನಿತೇಶ ಪಾಟೀಲ, ಜಿಪಂ ಸಿಇಒ ರಾಹುಲ್‌ ಶಿಂಧೆ, ಎಸ್ಪಿ ಭೀಮಾಶಂಕರ ಗುಳೇದ, ಪ್ರಭಾರಿ ಡಿವೈಎಸ್‌ಪಿ ರವಿ ಡಿ. ನಾಯ್ಕ, ಶ್ರೀಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ ಸೇರಿದಂತೆ ವಕೀಲರು, ಪತ್ರಕರ್ತರು, ಪೊಲೀಸ್‌ ಸಿಬ್ಬಂದಿ, ಸಾರ್ವಜನಿಕರು ಪಟ್ಟಣದಲ್ಲಿ ಹೆಲ್ಮೆಟ್ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೊರಟ ಬೈಕ್‌ ರ್‍ಯಾಲಿ ಬೆಳಗಾವಿ ರಸ್ತೆಯ ಬಸವ ಮಾರ್ಗ, ಹಳೇ ಬಸ್‌ ನಿಲ್ದಾಣ, ಮಿನಿ ವಿಧಾನಸೌಧ ಸಾಗಿ ಮರಳಿ ಸಂಗೊಳ್ಳಿ ರಾಯಣ್ಣದಲ್ಲಿ ಮುಕ್ತಾಯವಾಯಿತು.

ಇಲ್ಲಿನ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಜರುಗಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಬೈಕ್‌ ಸವಾರರು ಸಾಕಷ್ಟು ಜನ ಹೆಲ್ಮೆಟ್‌ ಇಲ್ಲದೆಯೇ ಸಂಚರಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರಿಗೆ ₹ 500 ದಂಡ ಕೊಡುವುದಕ್ಕಿಂತ ಅದರಲ್ಲಿ ಹೆಲ್ಮೆಟ್‌ ಖರೀದಿಸಿ ಪ್ರಾಣ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಭಾರ ಡಿವೈಎಸ್ಪಿ ರವಿ ನಾಯ್ಕ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಒ ಪ್ರವೀಣಕುಮಾರ ಸಾಲಿ, ಬಿಇಒ ಆರ್.ಟಿ.ಬಳಿಗಾರ, ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ರಾಮದುರ್ಗ, ಸುರೇಬಾನ, ಕಟಕೋಳ ಪೊಲೀಸರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಾಥ್‌ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ