ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಶಾಸಕ
ಇಡೀ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದು ನಿಜ. ಇಲ್ಲಿನ ತಾಲೂಕು ಆಸ್ಪತ್ರೆಯಿಂದಲೂ ಸ್ತ್ರೀರೋಗ ಹಾಗೂ ಮಕ್ಕಳ ತಜ್ಞರು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಂಡಿದ್ದಾರೆ. ಇಲ್ಲಿನ ವೈದ್ಯರ ಹುದ್ದೆ ತುಂಬಲು ನಾನು ಕಮಿಷನರ್ ಹಾಗೂ ಆರೋಗ್ಯ ಸಚಿವರ ಜತೆ ಮಾತನಾಡಿದ್ದೇನೆ. ಮೆಡಿಕಲ್ ಕಾಲೇಜು ಮುಗಿಸಿದ ವೈದ್ಯರನ್ನು ಇಲ್ಲಿಗೆ ನಿಯೋಜಿಸುವಂತೆ ಡಿಎಚ್ಓ ಬಳಿಯೂ ವಿನಂತಿಸಿದ್ದೇನೆ. ಇಲ್ಲಿನ ಆಸ್ಪತ್ರೆ ಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ತುಂಬಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು, ಒಂದು ವೇಳೆ ಖಾಸಗಿಯಾಗಿ ವೈದ್ಯರು ಬರಲು ತಯಾರಿದ್ದರೆ ಅವರ ಮನೆಗೆ ಹೋಗಿ ಕರೆದುಕೊಂಡು ಬರಲು ನಾನು ಸಿದ್ಧ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಜರುಗಿದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಲೆನಾಡು ಭಾಗದ ಗ್ರಾಮೀಣ ಜನರಿಗೆ ಉತ್ತಮ ಮತ್ತು ಸುಸಜ್ಜಿತ ವೈದ್ಯಕೀಯ ಸೇವೆ ಸಿಗಬೇಕು ಎನ್ನುವುದೇ ನನ್ನ ಏಕೈಕ ಆಶಯ. ಮುಂಬರುವ ಜು. ೧೬ರಂದು ಕೆಎಫ್‌ಡಿ ಮತ್ತು ಇತರ ಪ್ರಮುಖ ಆರೋಗ್ಯ ವಿಚಾರಗಳ ಕುರಿತು ಮಹತ್ವದ ಸಭೆ ಕರೆಯಲಾಗಿದ್ದು, ಅಲ್ಲಿಯೂ ಲಿಖಿತವಾಗಿ ನಮ್ಮ ಬೇಡಿಕೆಗಳನ್ನು ಸಲ್ಲಿಸಿ ಆಸ್ಪತ್ರೆಯ ಸರ್ವಾಂಗೀಣ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಲೋಕೇಶ ವೈ.ಆರ್., ತಾಪಂ ಇಓ ದೇವರಾಜ ಹಿತ್ತಲಕೊಪ್ಪ, ಉಪ ತಹಶೀಲ್ದಾರ ಜಿ.ಎಲ್. ಶ್ಯಾಮಸುಂದರ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.