ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ: ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯು ರೈತರನ್ನು ಕಾಡುತ್ತಿದ್ದು, ವರುಣನ ಅಭಾವದಿಂದ ತಾಲೂಕಿನ ಕೆರೆ ಕಟ್ಟೆಗಳು, ಚೆಕ್‌ ಡ್ಯಾಂಗಳು ಬರಿದಾಗಿದ್ದು, ರೈತರು ಆತಂಕಗೊಂಡಿದ್ದಾರೆ.

ಎಲ್‌ ನಿನೋ ಪ್ರಭಾವದಿಂದ ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗುತ್ತದೆ ಎನ್ನುವ ಅನುಮಾನವನ್ನು ಹವಾಮಾನ ಇಲಾಖೆ ನೀಡಿದೆ. ಈ ವರ್ಷ ಶೇ. 60ರಷ್ಟು ಮಳೆ ಕೊರತೆ ಕಂಡು ಬರುವ ಸಾಧ್ಯತೆ ಇದೆ. ಇದರಿಂದ ಮುಂಗಾರು ಹಂಗಾಮಿನ ಬಿತ್ತನೆ ಮಾಡಿದ ಬೆಳೆಗಳು ಕೈಕೊಡುವ ಲಕ್ಷಣ ಕಂಡುಬರುತ್ತಿದೆ.

ತಾಲೂಕಿನಲ್ಲಿ ಕಳೆದ 3- 4 ವರ್ಷಗಳಿಂದ ತುಂಬಿ ತುಳುಕುತ್ತಿದ್ದ ಕೆರೆ ಕಟ್ಟೆಗಳು ಹಾಗೂ ಚೆಕ್ ಡ್ಯಾಂಗಳು ಈ ವರ್ಷ ಮುಂಗಾರು ಹಂಗಾಮಿನಲ್ಲಿಯೇ ಬರಿದಾಗುವ ಮೂಲಕ ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.

ತಾಲೂಕಿನಲ್ಲಿ ಈ ಹಿಂದೆ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ದೊಡ್ಡ ಹಳ್ಳ ಸೇರಿದಂತೆ ವಿವಿಧ ಕಡೆ ನಿರ್ಮಾಣ ಮಾಡಿದ್ದ ಸುಮಾರು 20ಕ್ಕೂ ಹೆಚ್ಚು ಬ್ರಿಜ್ಡ್ ಕಂ ಬ್ಯಾರೇಜ್‌ಗಳು ನೀರಿಲ್ಲದೆ ಬಹುತೇಕ ಖಾಲಿಯಾಗಿವೆ. ಈ ಬ್ಯಾರೇಜು ಅಥವಾ ಚೆಕ್‌ ಡ್ಯಾಂಗಳಿಂದ ಕಾಡು ಪ್ರಾಣಿ, ಪಕ್ಷಿ ಸಂಕುಲಕ್ಕೆ ಹಾಗೂ ಅಕ್ಕಪಕ್ಕದಲ್ಲಿನ ಹೊಲಗಳಿಗೆ ನೀರು ಹಾಯಿಸಿ ನೀರಾವರಿ ಮಾಡಬೇಕೆನ್ನುವ ಉದ್ದೇಶವನ್ನು ಸಣ್ಣ ನೀರಾವರಿ ಇಲಾಖೆ ಹೊಂದಿತ್ತು.


ಇದಕ್ಕೂ ಮಿಗಿಲಾಗಿ ತಾಲೂಕಿನಲ್ಲಿ ಸುರಿದ ಮಳೆಯ ನೀರು ಹಳ್ಳಗಳ ಮೂಲಕ ವ್ಯರ್ಥವಾಗಿ ಹರಿದು ತುಂಗಭದ್ರಾ ನದಿಗೆ ಸೇರುವ ಜತೆಗೆ ಅಪಾರ ಪ್ರಮಾಣದ ಫಲವತ್ತಾದ ಮಣ್ಣನ್ನು ಕೊಚ್ಚಿಕೊಂಡು ಹೋಗಿ ತುಂಗಭದ್ರಾ ಜಲಾಶಯದ ಒಡಲನ್ನು ತುಂಬುತ್ತಿತ್ತು. ಈ ವರ್ಷ ಮುಂಗಾರು ಮಳೆ ನಿಗದಿತ ಪ್ರಮಾಣದಲ್ಲಿ ಆಗದಿರುವುದರಿಂದ ಚೆಕ್‌ ಡ್ಯಾಂಗಳು ಖಾಲಿಯಾಗಿವೆ.

ಇದರಿಂದ ರೈತರು ತಮ್ಮ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದೆ ಕೊಳವೆ ಬಾವಿಯ ನೀರನ್ನೇ ಅವಲಂಬಿಸಬೇಕಾಗಿದೆ. ಆದರೆ, ಕಾಡುಪ್ರಾಣಿ, ಕುರಿಗಳಿಗೆ ಹಾಗೂ ಪಕ್ಷಿಗಳಿಗೆ ಕುಡಿಯುವ ನೀರು ಇಲ್ಲದೆ ಪರಿತಪಿಸುವಂತಾಗಿದೆ.

ಪರ್ಯಾಯ ವ್ಯವಸ್ಥೆ: ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ. ಚೆಕ್ ಡ್ಯಾಂಗಳು ಈಗ ಖಾಲಿಯಾಗಿರುವುದರಿಂದ ಚೆಕ್ ಡ್ಯಾಂಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸುವ ಮೂಲಕ ಹೆಚ್ಚಿನ ನೀರು ನಿಲ್ಲುವಂತೆ ಮಾಡುವುದು ಅಗತ್ಯವಾಗಿದೆ ಎಂದು ಶ್ಯಾಬಳ ನಿವಾಸಿ ನಿಂಗನಗೌಡ ಪಾಟೀಲ ತಿಳಿಸಿದರು.