ವ್ಯಕ್ತಿತ್ವ ರೂಪಿಸಿಕೊಳ್ಳುವಂಥ ಪ್ರಾಮಾಣಿಕ ಪ್ರಯತ್ನ ಅಗತ್ಯ

KannadaprabhaNewsNetwork |  
Published : Aug 28, 2024, 12:45 AM IST
ಶ್ರೀಲಂಕಾದ ಕೋಲಂಬೋದಲ್ಲಿ ನಡೆದ ರಾಷ್ಟೀಯ ಬಸವ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ –2024 ರ ಕಾರ್ಯಕ್ರಮಲ್ಲಿ ಪಂಡಿತಾರಾಧ್ಯ ಸ್ವಾಮೀಜಿ  ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

A sincere effort is needed to develop a personality

-ರಾಷ್ಟೀಯ ಬಸವ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ –2024 ರ ಕಾರ್ಯಕ್ರಮ

------

ಕನ್ನಡಪ್ರಭ ವಾರ್ತೆ ಹೊಸದುರ್ಗ

ವಿಜ್ಞಾನದಿಂದ ಮಾನವನ ನೈತಿಕ ಶಕ್ತಿಯನ್ನು ಹೆಚ್ಚಿಸುವ, ಮಾನಸಿಕ ದೌರ್ಬಲ್ಯ ದೂರ ಮಾಡುವ, ಆತ್ಮಬಲ ಹೆಚ್ಚಿಸುವುದು ಸಾಧ್ಯವಿಲ್ಲ. ಅದು ಬಸವ, ಬುದ್ಧನಂಥವರ ತತ್ವಗಳಿಂದ ಮಾತ್ರ ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತರಾಧ್ಯ ಸ್ವಾಮೀಜಿ ಹೇಳಿದರು.

ಶ್ರೀಲಂಕಾದ ಕೋಲಂಬೋದಲ್ಲಿ ನಡೆದ ರಾಷ್ಟೀಯ ಬಸವ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ –2024 ರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಇವತ್ತಿನ ದಿನಮಾನಗಳಲ್ಲಿ ವೈಜ್ಞಾನಿಕವಾಗಿ ಮನುಷ್ಯ ಅದ್ಭುತ ಸಾಧನೆ ಮಾಡಿದ್ದಾನೆ. ಆದರೆ, ನೈತಿಕ ನೆಲೆಗಟ್ಟು ಕುಸಿದು ಮಾನಸಿಕವಾಗಿ ದುರ್ಬಲನಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಬಸವ, ಬುದ್ಧ ಇವರ ತತ್ವಗಳನ್ನು ಕೇವಲ ಉಪದೇಶ ಮಾಡಿದರೆ ಸಾಲದು. ನಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವಂಥ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.

ಬುದ್ಧ, ಬಸವಣ್ಣ ಅರಿವೇ ಗುರುವಾಗಿ, ಎಲ್ಲರೂ ದುಡಿಮೆ ಮಾಡಬೇಕು. ಅದು ಸತ್ಯ ಶುದ್ಧ ಕಾಯಕ ವಾಗಿರಬೇಕು ಎಂದರು. ಆದರೆ, ಇಂದು ದುಡಿಮೆ ಎಂದರೆ ಅದು ನೈತಿಕವಾಗಿಯೋ ಅಥವಾ ಅನೈತಿಕವಾಗಿಯೋ ಯೋಚಿಸದೇ ಬರೀ ಸಂಪಾದನೆ ಅಷ್ಟೆ ಎಂದು ಭಾವಿಸಿದ್ದೇವೆ. ಅನೈತಿಕವಾಗಿ ಸಂಪಾದಿಸಿದ್ದು, ಕಾಯಕವಾಗುವುದಿಲ್ಲ. ನಾಡಿನಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ವ್ಯಕ್ತಿಗಳು ಕಾಯಕ ನಿಷ್ಠೆ ಬೆಳೆಸಿಕೊಂಡರೆ ದೇಶದಲ್ಲಿ ಭ್ರಷ್ಟಾಚಾರ ಇಷ್ಟೊಂದು ತಾಂಡವ ನೃತ್ಯ ಮಾಡುತ್ತಿರಲಿಲ್ಲ. ಒಬ್ಬರು ಮತ್ತೊಬ್ಬರನ್ನು ಅವಹೇಳನ ಮಾಡಲಿಕ್ಕೆ ಸಾಧ್ಯ ಆಗುತ್ತಿರಲಿಲ್ಲ. ಇವತ್ತಿನ ಸ್ಥಿತಿ ಒಬ್ಬರು ಮತ್ತೊಬ್ಬರನ್ನು ದೂರುವುದೇ ಕಾಯಕವಾಗಿದೆ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಬುದ್ಧ, ಬಸವ ಆತ್ಮಾವಲೋಕನ ಮಾಡಿಕೊಂಡು ಲೋಕಕ್ಕೆ ಬೆಳಕನ್ನು ಕರುಣಿಸಿದರು ಎಂದರು.

ಬುದ್ಧ, ಬಸವ ಭಾರತದ ಎರಡು ಧರ್ಮಗಳ ಸಂಸ್ಥಾಪಕರು. ಒಬ್ಬರು ಬಿಹಾರದ ಮುತ್ತು. ಮತ್ತೊಬ್ಬರು ಕರ್ನಾಟಕದ ಕಣ್ಮಣಿ. ಒಬ್ಬರು ಏಷಿಯಾದ ಬೆಳಕಾದರೆ ಮತ್ತೊಬ್ಬರು ವಿಶ್ವದ ಬೆಳಕಾದವರು. ಬದ್ಧ ಬಸವಣ್ಣನವರ ತತ್ವಗಳ ನೆಲೆಗಟ್ಟಿನ ಮೇಲೆ ಸಮಾಜ ಮುನ್ನೆಡೆದರೆ ಮತ್ತೆ ಕಲ್ಯಾಣ ರಾಜ್ಯವನ್ನು ಮೈಗೂಡಿಸಿಕೊಳ್ಳಲಿಕ್ಕೆ ಸಾಧ್ಯ ಎಂದರು.

ಜಗತ್ತಿನಲ್ಲಿ ಯಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅವರಿಗೆ ಅಪಪ್ರಚಾರ ಇದ್ದದ್ದೆ. ಬಸವಣ್ಣ ಯಾವುದನ್ನು ಬೇಡವೆಂದು ಹೇಳಿದರೋ ಇವತ್ತು ಅದೇ ಬೇಕು ಎನ್ನುವ ವಾತಾವರಣ ಬಸವತತ್ವದ ಪ್ರೇಮಿಗಳಲ್ಲಿರುವುದು ದುರಂತ. ಶರಣರು ವೈದಿಕ ಪರಂಪರೆಯನ್ನು ನಿರಾಕರಣೆ ಮಾಡಿದರು. ಇವುಗಳನ್ನು ನೇರವಾಗಿ ಹೇಳಿದ ಕೂಡಲೇ ಪಂಡಿತಾರಾಧ್ಯ ಸ್ವಾಮಿಗಳು ಧರ್ಮದ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ ಎಂದು ಅಪಪ್ರಚಾರ ಮಾಡುವರು. ಶರಣರು ಅನ್ಯಾಯವನ್ನು ಅನ್ಯಾಯವೆಂದು ನೇರವಾಗಿ ಖಂಡಿಸುತ್ತಿದ್ದರು. ಹೊತ್ತು ಬಂದಂತೆ ಕೊಡೆಹಿಡಿಯುವ ಪ್ರವೃತ್ತಿ ಶರಣದ್ದಾಗಿರಲಿಲ್ಲ. ಶರಣರ ಹಾದಿಯಲ್ಲಿಯೇ ನಾವು ಮುನ್ನಡೆಯುತ್ತಿದ್ದೇವೆ ಎಂದರು.

"ಬುದ್ಧ ಬಸವರ ಬೆಳಕು " ವಿಶೇಷ ಉಪನ್ಯಾಸ ಮತ್ತು ಚಿಂತನಾ ಗೋಷ್ಠಿ ನಡೆಯಿತು. ಈ ಸಮಾರಂಭದ ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಇಸ್ರೋದ ವಿಶ್ರಾಂತ ಅಧ್ಯಕ್ಷ ಕಿರಣ್ ಕುಮಾರ ಮಾಡಿದರು.

ಶ್ರೀ ಚಂದ್ರಶೇಖರ ಸ್ವಾಮೀಜಿ ಉಪಸ್ಥಿತರಿದ್ದರು. ವಿಶೇಷ ಉಪನ್ಯಾಸವನ್ನು ಚಟ್ನಳ್ಳಿ ಮಹೇಶ್ ಮತ್ತು ರಂಜಾನ್ ದರ್ಗಾ ನೀಡಿದರು.

ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರಿಂದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ "ಮರಣವೇ ಮಹಾನವಮಿ " ನಾಟಕ ಪ್ರದರ್ಶನ ನಡೆಯಿತು.

-----

ಫೋಟೋ, 27hsd1: ಶ್ರೀಲಂಕಾದ ಕೋಲಂಬೋದಲ್ಲಿ ನಡೆದ ರಾಷ್ಟೀಯ ಬಸವ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ –2024 ರ ಕಾರ್ಯಕ್ರಮಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ