ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನಲ್ಲಿ ಭೀಮಾನದಿಯಿಂದ ಪ್ರವಾಹಕ್ಕೆ ಒಳಗಾದ ರೋಡಗಿ, ಮಿರಗಿ, ಖೇಡಗಿ, ಚಿಕ್ಕಮಣೂರ, ಗುಬ್ಬೇವಾಡ, ಶಿರಗೂರ, ಅಗರಖೇಡ, ಹಿಂಗಣಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳೊಂದಿಗೆ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಪ್ರವಾಹ ಹಾಗೂ ಮಳೆಯಿಂದ ಮುಂಗಾರು ಬೆಳೆಗಳಾದ ಹತ್ತಿ, ತೊಗರಿ, ಮೆಕ್ಕೆಜೋಳ, ಕಬ್ಬು, ಉದ್ದು ಹಾಗೂ ತೋಟಗಾರಿಕೆ ಬೆಳೆಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಲಿಂಬೆ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿವೆ. ಹಿಂಗಾರು ಬೆಳೆಯು ಕೈಗೊಳ್ಳದಂತೆ ಜಮೀನುಗಳಲ್ಲಿ ನೀರು ನಿಂತಿದೆ. ರೈತರ ಸಮಸ್ಯೆ ಕುರಿತು ಸಿಎಂ ಬಳಿ ಈಗಾಗಲೇ ಚರ್ಚಿಸಿದ್ದೇನೆ. ರೈತರಿಗೆ ಸಮರ್ಪಕ ಬೆಳೆ ಪರಿಹಾರ ಒದಗಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.ಮಹಾ ಮಳೆಗೆ ಮನೆಗೋಡೆಗಳು ಕುಸಿದಿವೆ. ಕೆಲವು ಮನೆಗಳು ಸಂಪೂರ್ಣ ಬಿದ್ದಿರುವ ಕುರಿತು ಪರಿಶೀಲಿಸಿದ್ದೇನೆ. ಮನೆಗೆ ಹಾನಿಯಾದ ಕುಟುಂಬಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ದೊರಕಿಸಿಕೊಡುವುದಾಗಿ ಹೇಳಿದರು. ಇನ್ನೂ ಪ್ರವಾಹದಿಂದ ಸರ್ಕಾರಿ, ಖಾಸಗಿ ಶಾಲೆ, ಅಂಗನವಾಡಿ, ಕಚೇರಿ ಕಟ್ಟಡಗಳು ಹಾಗೂ ರಸ್ತೆಗಳು ಹಾಳಾಗಿರುವ ಬಗ್ಗೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನಿಡಲಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ಫಲಾನುಭವಿಯ ಹೆಸರು ಬಿಟ್ಟು ಹೋಗದಂತೆ ಜಾಗೃತಿಯಿಂದ ವರದಿ ತಯಾರಿಸಲು ಸೂಚಿಸಲಾಗಿದೆ ಎಂದರು.
ಭೀಮಾನದಿ ಪ್ರವಾಹದಿಂದ ಬಾಧಿತವಾಗುವ ತಾಲೂಕಿನ ರೋಡಗಿ, ಮಿರಗಿ ಗ್ರಾಮಗಳ ಸ್ಥಳಾಂತರ ಹಾಗೂ ಹೊಸ ಬಡಾವಣೆ ನಿರ್ಮಾಣಕ್ಕೆ ಸರ್ಕಾರದ ಗಮನ ಸೆಳೆದು ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಹಾನಿಗೊಳಗಾದ ಸಾರ್ವಜನಿಕರು, ರೈತರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ಸರ್ಕಾರ, ನಾವು ಇದ್ದೇವೆ. ಧೈರ್ಯವಾಗಿ ಇರಬೇಕು. ತಾಲೂಕು ಆಡಳಿತದಿಂದ ಜನರ ರಕ್ಷಣೆಗಾಗಿ ಕಾಳಜಿ ಕೇಂದ್ರ, ಜಾನುವಾರುಗಳಿಗೆ ಗೋಶಾಲೆ ತೆರೆಯಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಮತ್ತೆ ಭೀಮೆ ಅಬ್ಬರ ಏರಿಕೆ