ಸೋಮವಾರಪೇಟೆ: ರೈತರ ಕುಂದು ಕೊರತೆ ಸಭೆ

KannadaprabhaNewsNetwork |  
Published : Sep 30, 2025, 12:02 AM IST
ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ಮನವಿಯ ಮೇರೆಗೆ ರೈತರ ಕುಂದು ಕೊರತೆ ಸಭೆ-ಉಪವಿಭಾಗಾಧಿಕಾರಿ ಅಧ್ಯಕ್ಷತೆ | Kannada Prabha

ಸಾರಾಂಶ

ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ಮನವಿಯ ಮೇರೆಗೆ ರೈತರ ಕುಂದುಕೊರತೆ ಸಭೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ಮನವಿಯ ಮೇರೆಗೆ ರೈತರ ಕುಂದು ಕೊರತೆ ಸಭೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಗುರುವಾರ ನಡೆಯಿತು.ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ತಾಲೂಕಿನ ರೈತರ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿ, ಇಂದಿನ ಕುಂದುಕೊರತೆ ಸಭೆಯಲ್ಲಿ ಚರ್ಚೆಗೊಳಪಟ್ಟ ಎಲ್ಲ ವಿಷಯಗಳನ್ನು ನೋಟ್ ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ಸಿ ಮತ್ತು ಡಿ, ಸೆಕ್ಷನ್ 4 ಹಾಗೂ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ರೈತರು ಹೋರಾಟ ನಡೆಸಿಕೊಂಡು ಬರುತ್ತಿದ್ದೀರಿ. ಆದರೂ, ಇಂದಿಗೂ ಸಮಸ್ಯೆ ಹಾಗೆ ಉಳಿದಿದೆ. ಮೊದಲು ಸಂಬಂಧಿಸಿದ ಸ್ಥಳವನ್ನು ಪೂರ್ತಿ ಸರ್ವೆ ಮಾಡಿದಲ್ಲಿ ಮಾತ್ರ ವಾಸ್ತವಾಂಶ ತಿಳಿಯಲಿದ್ದು, ನಂತರ ಸಮಸ್ಯೆ ಪರಿಹಾರಕ್ಕೆ ಮುಂದಾಗಬಹುದು. ಆದುದರಿಂದ ಸ್ಥಳೀಯ ರೈತರು ಜಂಟಿ ಸರ್ವೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಮಟ್ಟದಲ್ಲಿ ಸಭೆ:

ಸರ್ವೆ ಮಾಡಿದ ನಂತರ ವಸ್ತು ಸ್ಥಿತಿಯ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುವುದು. ನಂತರ ರಾಜ್ಯ ಸರ್ಕಾರಕ್ಕೆ ವರದಿ ಕಳಿಸಲಾಗುವುದು. ಅಲ್ಲಿಂದ ಕೇಂದ್ರಕ್ಕೆ ವರದಿ ಹೋಗುವುದು. ಇದರಲ್ಲಿ ಯಾವುದೇ ರೈತರು ಭಯಪಡುವ ಅವಶ್ಯಕತೆ ಇಲ್ಲ. ವರದಿ ರೈತರ ಪರವಾಗಿಯೇ ಹೋಗುವುದು. ಈಗಿನ ನಿಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮುಂದಿನ ಒಂದು ತಿಂಗಳಿನಲ್ಲಿ ಮತ್ತೆ ಕುಂದು ಕೊರತೆ ಸಭೆ ಸೇರಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು. ಎಲ್ಲ ಭೂ ದಾಖಲೆಗಳು ಡಿಜಿಟಲೈಜೆಷನ್ ಮಾಡುತ್ತಿರುವುದರಿಂದ ರೈತರ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಸರಿಪಡಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಇಲಾಖಾ ಕಚೇರಿಯಲ್ಲಿ ಕುಳಿತು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿ ವರದಿಯನ್ನು ಸರ್ಕಾರಕ್ಕೆ ನೀಡಿದ ಪರಿಣಾಮ ಇಂದು ರೈತರು ಅನುಭವಿಸುತ್ತಿದ್ದಾರೆ. ಇದನ್ನು ಅಧಿಕಾರಿಗಳೇ ಸರಿಪಡಿಸಬೇಕಿದೆ ಎಂದು ಹೇಳಿದರು. ಈ ಸಂದರ್ಭ ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಹಿಂದಿನ ಅಧಿಕಾರಿಗಳ ತಪ್ಪಿನಿಂದಾಗಿ ಸಮಸ್ಯೆ ಆಗಿರುವುದು ನಿಜ. ಅದನ್ನು ಮುಂದೆ ಸರ್ವೆ ನಡೆಸಿ, ಯಾವುದೇ ರೈತರಿಗೂ ಸಮಸ್ಯೆಯಾಗದಂತೆ ವಸ್ತುನಿಷ್ಠ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು.ಸರಿಪಡಿಸಲು ಸಾಧ್ಯವಿಲ್ಲ:

ಈಗಾಗಲೆ ಸರ್ವೆ ನಡೆಸಿ ಅರಣ್ಯ ಎಂದು ಭೂಮಿಯ ದಾಖಲೆಯನ್ನು ಅರಣ್ಯದ ಹೆಸರಿಗೆ ವರ್ಗಾಯಿಸಲಾಗಿದೆ. ಒಮ್ಮೆ ಅರಣ್ಯದ ಹೆಸರಿಗೆ ದಾಖಲಾತಿ ವರ್ಗವಾದಲ್ಲಿ ಅದನ್ನು ಸ್ಥಳೀಯ ಅಧಿಕಾರಿಗಳು ಸರಿಪಡಿಸಲು ಸಾಧ್ಯವಿಲ್ಲ. ಇವರು ರಾಜ್ಯ ಸರ್ಕಾರಕ್ಕೆ ವರದಿಯನ್ನು ನೀಡಿ, ಅಲ್ಲಿಂದ ಕೇಂದ್ರಕ್ಕೆ ಸಲ್ಲಿಕೆಯಾದ ನಂತರ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬಹುದು. ಆದುದರಿಂದ ಸ್ಥಳೀಯವಾಗಿ ಮಾಡುವ ಯಾವುದೇ ಹೋರಾಟಗಳು ಯಶಸ್ವಿಯಾಗುವುದಿಲ್ಲ. ಬದಲಿಗೆ ರಾಜ್ಯ ಸರ್ಕಾರದ ಕಾರ್ಯದರ್ಶಿ ಕಚೇರಿಯ ಎದುರು ಹೋರಾಟ ನಡೆಸಿದಲ್ಲಿ ಮಾತ್ರ ರೈತರಿಗೆ ಅನುಕೂಲವಾಗುವುದು ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಹೇಳಿದರು.1908 ರಿಂದ 2000 ದವರೆಗೆ ನೇಗಳ್ಳೆ ಕರ್ಕಳ್ಳಿ, ಬಸವನಕೊಪ್ಪ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ದಾಖಲಾತಿ ನೀಡಿದ ನಂತರವೂ ಅದನ್ನು ಸಿ ಮತ್ತು ಡಿ ಭೂಮಿ ಮತ್ತು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚರ್ಕವರ್ತಿ ಸುರೇಶ್ ಸಭೆಯ ಗಮನಕ್ಕೆ ತಂದರು. ಸರ್ಕಾರ ಆದೇಶ ನೀಡಿರುವುದರಿಂದ ಕಂದಾಯ ಮತ್ತು ಅರಣ್ಯ ಇಲಾಖೆಯವರು ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸುತ್ತಿದ್ದಾರೆ. ಆದರೆ, ಹಲವೆಡೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದನ್ನು ಮೊದಲು ತೆರವುಗೊಳಿಸುವ ಕೆಲಸ ಅರಣ್ಯ ಇಲಾಖೆಯಿಂದಾಗಬೇಕು. ರೈತರ ಕೃಷಿಭೂಮಿ ಸಮಸ್ಯೆ ಕೇವಲ ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಹೆಚ್ಚಾಗಿದೆ. ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಪರಿಹರಿಸಬೇಕು ಎಂದರು. ರೈತರ ಕೃಷಿ ಭೂಮಿ 2018ರಿಂದಲೂ ದುರಸ್ತಿಯಾಗಿಲ್ಲ. ಹಣ ನೀಡಿದವರ ಅರ್ಜಿ ವಿಲೇವಾರಿಯಾಗಿ ದುರಸ್ತಿಯಾಗಿದೆ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಸೂಕ್ತ ಮನಸ್ಸು ಮಾಡಿದಲ್ಲಿ ಮಾತ್ರ ಸಾಧ್ಯ ಎಂದು ಅನಿಲ್ ತಿಳಿಸಿದರು. ವೇದಿಕೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಎಸಿಎಫ್ ಗೋಪಾಲ್ ಹಾಗೂ ಕಂದಾಯ, ಸರ್ವೆ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಇದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ